×
Ad

ಮಹಿಳೆಯರ ಸಮಸ್ಯೆ ಅಧ್ಯಯನಕ್ಕೆ ಪ್ರತ್ಯೇಕ ಸಮೀಕ್ಷೆ ಅಗತ್ಯ: ಡಾ.ಇಂದುಮತಿ ರಾವ್

Update: 2016-03-08 23:20 IST

ಬೆಂಗಳೂರು, ಮಾ.8: ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು ಜನಗಣತಿ ಮಾದರಿಯಲ್ಲಿ ಪ್ರತ್ಯೇಕವಾದ ಸಮೀಕ್ಷೆಯ ಅಗತ್ಯವಿದೆ ಎಂದು ಯುಜಿಸಿ ಮಹಿಳಾ ಅಧ್ಯಯನ ಸ್ಥಾಯಿ ಸಮಿತಿ ಸದಸ್ಯೆ ಡಾ.ಇಂದುಮತಿರಾವ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ವತಿಯಿಂದ ಜ್ಞಾನಭಾರತಿ ಆವರಣದಲ್ಲಿನ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಿಳಾ ಶೋಷಣೆ ಎಂಬುದು ಒಂದು ಸ್ತರಕ್ಕೆ ಸೀಮಿತ ವಾಗಿಲ್ಲ. ವಯಸ್ಸು, ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆ ಯಲ್ಲಿಯೂ ಶೋಷಣೆಯನ್ನು ಎದುರಿಸುವಂತಾಗಿದೆ. ಭಾರತೀಯ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು, ಗ್ರಾಮೀಣ ಮಳೆಯರು ಮತ್ತು ವಿಕಲಚೇತನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದು ಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಸ್ತ್ರೀ ಸ್ವಾತಂತ್ರದ ಬಗ್ಗೆ ಮಾತನಾಡುವಾಗ ವಾಸ್ತವಿಕತೆಯನ್ನೂ ಗಮನದಲ್ಲಿಟ್ಟು ಕೊಳ್ಳಬೇಕು, ಮಹಿಳೆಯರು ಉನ್ನತ ಹುದ್ದೆಗಳಲ್ಲಿ ಇದ್ದರೂ ಅನೇಕ ಬಾರಿ ಅವಮಾನಗಳನ್ನು ಎದುರಿಸಿರುವ ನಿದರ್ಶನಗಳು ನಮ್ಮ ಮುಂದಿವೆ ಎಂದು ಅವರು ಹೇಳಿದರು.

ಸಾಮಾಜಿಕ ಬದಲಾವಣೆಯ ಬೀಗದ ಕೈ ಹಿಡಿದಿರುವ ವ್ಯವಸ್ಥೆಯಲ್ಲಿಯೆ ಅನುಮಾನಗಳು ಕಾಡುತ್ತವೆ. ಬಾಯಲ್ಲಿ ಸ್ತ್ರೀವಾದವನ್ನು ಒಪ್ಪುವ ವಿಚಾರವಂತರು ವಾಸ್ತವ ಘಟ್ಟಕ್ಕೆ ಬಂದಾಗ ತಮ್ಮ ನಿಲುವನ್ನು ಬದಲಾಯಿಸುತ್ತಾರೆ ಎಂದು ಲೇಖಕಿ ಡಾ.ಆಶಾದೇವಿ ಎಂ.ಎಸ್. ಅಸಮಾಧಾನ ವ್ಯಕ್ತಪಡಿಸಿದರು. ದೇಶವನ್ನು ಕಾಯುವ ಯೋಧರು ಗಡಿಭಾಗದಲ್ಲಿನ ಗ್ರಾಮೀಣ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದಾಗಲೂ ಹಿರಿಯ ಅಧಿಕಾರಿಗಳು ಮಹಿಳೆಯರನ್ನೇ ದೂಷಿಸುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿವಿ ಉಪಕುಲಪತಿ ಪ್ರೊ.ತಿಮ್ಮೇಗೌಡ, ಕುಲಸಚಿವೆ ಪ್ರೊ.ಕೆ.ಕೆ.ಸೀತಮ್ಮ, ಸಂಯೋಜಕ ಡಾ.ಎಂ.ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News