×
Ad

ಮಹಿಳಾ ಸಮಾನತೆಗೆ ಒತ್ತು ನೀಡಿರುವ ಇಸ್ಲಾಮ್: ಗೌರಿ ಲಂಕೇಶ್

Update: 2016-03-08 23:21 IST

ಬೆಂಗಳೂರು, ಮಾ.8: ಇಸ್ಲಾಮ್ ಧರ್ಮದಲ್ಲಿ ಮಹಿ ಳೆಗೆ ಪುರುಷನಷ್ಟೆ ಸರಿಸಮಾನವಾದ ಹಕ್ಕುಗಳನ್ನು ನೀಡಲಾಗಿದ್ದರೂ ಇಂದಿಗೂ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ ವಾಗುತ್ತಿಲ್ಲ ಎಂದು ಪತ್ರಕರ್ತೆ ಗೌರಿ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ನಗರದ ದಾರುಸ್ಸಲಾಮ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಲಿಂಗಾಯತ ಹಾಗೂ ಇಸ್ಲಾಮ್ ಧರ್ಮದಲ್ಲಿ ಇತರೆಲ್ಲಾ ಧರ್ಮಗಳಿಗಿಂತ ಮಹಿಳೆಯರಿಗೆ ಹೆಚ್ಚಿನ ಹಕ್ಕು, ಸ್ವಾತಂತ್ರ ನೀಡಲಾಗಿದೆ. ಆ ಹಕ್ಕುಗಳನ್ನು ಹೋರಾಟ ಮಾಡುವ ಮೂಲಕವೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಕಾಲದಲ್ಲಿ ಮಹಿಳೆಯರು ಯುದ್ಧಭೂಮಿಯಲ್ಲಿ ಹೋರಾಡುವ, ಪ್ರವಚನ ನೀಡುವ ಕೆಲಸ ಮಾಡುತ್ತಿದ್ದರು. ವ್ಯಾಪಾರ ಮಾರುಕಟ್ಟೆಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ, ಆಧುನಿಕ ಸಮಾಜದಲ್ಲಿ ಮಹಿಳಾ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜೆಎನ್‌ಯು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅದ್ಭುತ ಹುಡುಗ. ಎಲ್ಲೋ ಇದ್ದವನನ್ನು ಲೋಕಕ್ಕೆ ಪರಿಚಯಿಸಿದ ಪ್ರಧಾನಿ ಮೋದಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದ ಅವರು, ಕನ್ಹಯ್ಯೆ, ಉಮರ್ ಖಾಲಿದ್, ಶೆಹ್ಲಾ ರಶೀದ್‌ರಂತಹ ಯುವಕರು ನಮ್ಮ ಸಮಾಜಕ್ಕೆ ಬೇಕಾಗಿದ್ದಾರೆ ಎಂದು ಗೌರಿ ಲಂಕೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬದುಕು ಕಮ್ಯುನಿಟಿ ಕಾಲೇಜಿನ ಪ್ರಾಂಶುಪಾಲೆ ಇಶ್ರತ್ ನಿಸಾರ್ ಮಾತನಾಡಿ, ಸಮಾಜದ ಅರ್ಧದಷ್ಟು ಮಹಿಳೆಯರಿದ್ದಾರೆ. ಇವರು ಮನೆಯಿಂದ ಹೊರಗೆ ಬಂದರೆ ಸಮಾಜದ ಬದಲಾವಣೆಯಾಗುತ್ತದೆ. ಬದಲಾವಣೆಯ ಬೀಜವನ್ನು ಮಹಿಳೆ ತನ್ನ ಮನೆಯಲ್ಲೇ ಬಿತ್ತಬೇಕು. ಮಹಿಳೆಯೆಂದರೆ ಪ್ರೀತಿ, ಮಮತೆ, ವಿಶ್ವಾಸ, ತಾಳ್ಮೆ, ತ್ಯಾಗದ ಪ್ರತೀಕ. ಇದರೊಂದಿಗೆ ಆಕೆ ಧೈರ್ಯ ಮತ್ತು ಶಕ್ತಿಯನ್ನು ಹೊಂದಿದ್ದಾಳೆ ಎಂಬುದನ್ನು ಮರೆಯಬಾರದು. ಅಡುಗೆ ಮನೆಯನ್ನು ನಿಭಾಯಿಸುವ ಆಕೆಗೆ ಹೊರಗಿನ ಶಕ್ತಿಯ ವಿರುದ್ಧವೂ ಹೋರಾಡುವ ಶಕ್ತಿ ಇದೆ ಎಂದು ಹೇಳಿದರು.
ಇಸ್ಲಾಮ್ ಧರ್ಮ ಮಹಿಳೆಗೆ ಎಲ್ಲ ಹಕ್ಕುಗಳನ್ನು ನೀಡಿದೆ. ಆದರೆ ಅದು ಕೇವಲ ಪುಸ್ತಕಗಳಿಗೆ ಸೀಮಿತವಾಗಿದೆ. ಈ ಹಕ್ಕುಗಳನ್ನು ಪಡೆಯಲು ಮಹಿಳೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆ ಸುಶಿಕ್ಷಿತಳಾದರೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮತ್ತು ಜಾಗೃತಿ ಉಂಟಾಗುತ್ತದೆ ಎಂದು ಅವರು ಹೇಳಿದರು.
ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲುಬ್ನಾ ಮೀನಾಝ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ಹಕ್ಕು ಕೇಳಿದವರನ್ನು, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದವರನ್ನು ಭಯೋತ್ಪಾದಕರು ಎಂದು ಜೈಲಿಗಟ್ಟಲಾಗುತ್ತಿದೆ. ಮಾನವ ಹಕ್ಕು ಹೋರಾಟಗಾರರು, ಪ್ರಗತಿಪರರನ್ನು ಹಣಿಯಲಾಗುತ್ತಿದೆ. ಇವೆಲ್ಲವುಗಳ ಬಗ್ಗೆ ಧ್ವನಿ ಎತ್ತಬೇಕಾಗಿದೆ. ಸಂಘಟನೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಸುಲಭವಾಗಿ ಜೈಲಿನಿಂದ ಹೊರಗೆ ಬರುತ್ತಿದ್ದು ಪುನಃ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾನೆ. ಆದ್ದರಿಂದ ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಎನ್‌ಡಬ್ಲ್ಯುಎಫ್‌ನ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಮಹಿಳಾ ಸಂಘದ ಅಧ್ಯಕ್ಷೆ ರಾಜಮ್ಮ, ನವ ಜಾಗೃತಿ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಮ್ಮ, ಮಾನಸ ಮಹಿಳಾ ಮಂಡಳಿಯ ರೇಣುಕಾ, ಸಯೀದಾ ಯೂಸುಫ್, ಸಬ್ನಾ ಮತ್ತಿತರರು ಹಾಜರಿದ್ದರು. ಇದಕ್ಕೂ ಮೊದಲು ಸಂಘಟನೆಯ ಕಾರ್ಯಕರ್ತರು ಕೋಲ್ಸ್‌ಪಾರ್ಕ್‌ನಿಂದ ಕಾರ್ಯಕ್ರಮ ನಡೆದ ಕ್ವೀನ್ಸ್ ರಸ್ತೆಯ ದಾರುಸ್ಸಲಾಮ್ ಕಟ್ಟಡದವರೆಗೆ ಜಾಗೃತಿ ಜಾಥಾ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News