×
Ad

ಹುಲಿ, ಆನೆಗಳ ರಾಜಧಾನಿ ಕರ್ನಾಟಕ: ರಮಾನಾಥ ರೈ

Update: 2016-03-09 22:39 IST

ಬೆಂಗಳೂರು, ಮಾ.9: ದೇಶದಲ್ಲಿಯೆ ಹೆಚ್ಚಿನ ಸಂಖ್ಯೆಯಲ್ಲಿ ಹುಲಿ ಹಾಗೂ ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದ್ದು, ಈ ಸಾಧನೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯ ಶ್ರಮವೇ ಕಾರಣ ಎಂದು ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಅಭಿನಂದಿಸಿದ್ದಾರೆ.
ಬುಧವಾರ ಸಿಎಸ್‌ಎಸ್ ಕಾರ್ಪ್ ಸಂಸ್ಥೆಯು ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ‘ವೈಜ್ಞಾನಿಕ ನಿಯತಕಾಲಿಕೆ’ಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 400 ಹುಲಿಗಳ ಇದ್ದು, ಅದರ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.
ವನ್ಯಜೀವಿಗಳು ಹಾಗೂ ಮನುಷ್ಯನ ನಡುವೆ ನಡೆಯುತ್ತಿರುವ ಸಂಘರ್ಷವನ್ನು ತಡೆಯುವುದು ಅರಣ್ಯ ಇಲಾಖೆಯ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಹೀಗಾಗಿ ಅರಣ್ಯವನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ದಟ್ಟವಾಗಿಸುವ ಮೂಲಕ ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯುವಂತಹ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ರಮಾನಾಥ ರೈ ಹೇಳಿದ್ದಾರೆ.
ವನ್ಯಜೀವಿಗಳು ಇದ್ದರೆ ಮಾತ್ರ ಕಾಡು ಇರಲು ಸಾಧ್ಯ ಎಂಬ ಸತ್ಯವನ್ನು ಜನತೆ ಅರಿಯಬೇಕು. ಕಾಡು ಸಮೃದ್ಧವಾಗಿದ್ದರೆ ಮಳೆ, ಬೆಳೆಗೆ ಸಮಸ್ಯೆಯಾಗುವುದಿಲ್ಲ. ಉತ್ತಮ ಮಳೆಯಾದರೆ ರೈತರು ನೆಮ್ಮದಿಯಿಂದ ಜೀವನ ಸಾಗಿಸಬಹುದು. ಹೀಗಾಗಿ ಕಾಡು ಇದ್ದರೆ ಮಾತ್ರ ನಾಡು ಎಂಬ ವಾಸ್ತವವನ್ನು ಅರಿತು ಅರಣ್ಯ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.
ಅರಣ್ಯ ಇಲಾಖೆಯ ಕಾರ್ಯದರ್ಶಿ ಮಹೇಂದ್ರ ಜೈನ್ ಮಾತನಾಡಿ, ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಹುಲಿಗಳ ಜೀವನ ಕ್ರಮಗಳ ಹಂತಗಳನ್ನು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
 ಸಿಎಸ್‌ಎಸ್ ಕಾರ್ಪ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟೈಗರ್ ರಮೇಶ್ ಮಾತನಾಡಿ, ವನ್ಯಜೀವಿಗಳ ಚಲನವಲನಗಳನ್ನು ತಿಳಿಯುವ ನಿಟ್ಟಿನಲ್ಲಿ ಸಿಎಸ್‌ಎಸ್ ಕಾರ್ಪ್ ಸಂಸ್ಥೆಯು ಅರಣ್ಯ ಇಲಾಖೆಗೆ 800 ಕ್ಯಾಮೆರಾಗಳನ್ನು ಉಚಿತವಾಗಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಅಗತ್ಯವಿರುವ ನೆರವನ್ನು ನೀಡಲು ಸಿದ್ಧವಿದ್ದೇವೆ ಎಂದು ತಿಳಿಸಿದರು.
72 ವಯಸ್ಕ ಹುಲಿಗಳ ಚಟುವಟಿಕೆಗಳು ರಾಷ್ಟ್ರೀಯ ಹುಲಿ ವೈಜ್ಞಾನಿಕ ನಿಯತಕಾಲಿಕದಲ್ಲಿ ದಾಖಲಿಸಲಾಗಿದೆ. ಹುಲಿಗಳ ಚಿತ್ರಗಳು ಹಾಗೂ ಹುಲಿಯ ಮೇಲ್ಭಾಗದಲ್ಲಿರುವ ಪಟ್ಟಿಗಳ ಪ್ರತಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾವಳಿ ಪ್ರಕಾರ 4ನೆ ಹಂತದ ಹುಲಿ ಸಮೀಕ್ಷೆಯಲ್ಲಿ ಕ್ಯಾಮೆರಾ ಟ್ರಾಪ್ ಬಳಕೆ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಮುಖ್ಯಸ್ಥ ವಿನಯ್ ಲೂತ್ರ, ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಗೋಕುಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News