×
Ad

ಪರಿಶಿಷ್ಟ ಜಾತಿ, ಪಂಗಡಗಳ ಉದ್ದಿಮೆದಾರರಿಗೆ ಸಬ್ಸಿಡಿ ಸಹಿತ ಕಡಿಮೆ ಬಡ್ಡಿ ದರದಲ್ಲಿ ಸಾಲ: ಆಂಜನೇಯ

Update: 2016-03-09 23:53 IST

ಬೆಂಗಳೂರು, ಮಾ. 9: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರಿಗೆ ಸಬ್ಸಿಡಿ ಸಹಿತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಆದೇಶ ಹೊರಡಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಎಂಟರ್‌ಪ್ರಿನ್ಯೂರ್ಸ್‌ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ‘ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳು ಹಾಗೂ ಜನಾಂಗದವರು ಉದ್ದಿಮೆದಾರರಾಗಲು 2016-17ನೆ ಸಾಲಿನ ಆಯವ್ಯಯದಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡಬೇಕು’ ಎಂಬ ವಿಷಯ ಕುರಿತು ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಎಸ್ಸಿ-ಎಸ್ಟಿ ಉದ್ದಿಮೆದಾರರು ಸಾಲ ಪಡೆಯಲು ಎದುರಿಸುವ ತೊಂದರೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವ ಜೊತೆಗೆ ಉದ್ದಿಮೆದಾರರಿಗೆ ಅಗತ್ಯವಾದ ಸಾಲದ ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಬ್ಸಿಡಿಯೊಂದಿಗೆ ಒದಗಿಸಲು ಕ್ರಮವಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಇದೀಗ ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ಮತ್ತು ಸಬ್ಸಿಡಿ ನೀಡಲಾಗುತ್ತಿದೆ. ಇದಕ್ಕೆ ಶೇ.100ರಷ್ಟು ಭದ್ರತೆ ಒದಗಿಸಬೇಕು. ಜೊತೆಗೆ ಸಾಲ ನೀಡಲು 3.5ರಷ್ಟು ಶುಲ್ಕ ಕಡಿತ ಮಾಡಲಾಗುತ್ತದೆ. ಸುಲಭವಾಗಿ ಸಾಲ ಪಡೆಯಲು ಸಾಧ್ಯವಾಗುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ಪೂರ್ಣಗೊಳಿಸಿ ಸಾಲ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ ಅಗತ್ಯವಾದ ಎಲ್ಲ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಅಧಿಕಾರಿಗಳಾದ ಮುಹಮ್ಮದ್ ಮೊಸಿನ್, ಕೆ.ತಂಗರಾಜ್, ವೆಂಕೋಬಯ್ಯ, ಶ್ರೀನಿವಾಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಸೇರಿ ಪ್ರಮುಖರು ಉಪಸ್ಥಿತರಿದ್ದರು.

♦♦♦

ಸಾಲು ಮರದ ತಿಮ್ಮಕ್ಕನವರ ಹೆಸರಿನಲ್ಲಿ ರಾಜ್ಯ ಸರಕಾರ ನೆರಳು ಎಂಬ ಯೋಜನೆ ಘೋಷಿಸಿದೆ. ವೈಯಕ್ತಿಕವಾಗಿ ತಿಮ್ಮಕ್ಕ ಅವರಿಗೆ ನೆರವು ನೀಡುವ ಯಾವ ಯೋಜನೆ ಬಜೆಟ್‌ನಲ್ಲಿ ಘೋಷಿಸಿರಲಿಲ್ಲ. ಅವರಿಗೆ ಗಿಡ ಬೆಳೆಸುವ ನರ್ಸರಿ ಆರಂಭಿಸುವಂತೆ ನಾನು ವೈಯಕ್ತಿಕ ಸಲಹೆ ನೀಡಿದ್ದೆ. ಕಂದಾಯ ಇಲಾಖೆಯಿಂದ ಭೂಮಿ ಮಂಜೂರಾದ ನಂತರ ಅಗತ್ಯ ಅನುದಾನ ಕೊಡುತ್ತೇವೆ.
 - ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News