×
Ad

ಮುಖ್ಯಮಂತ್ರಿ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿಲ್ಲ: ಡಾ.ಜಿ.ಪರಮೇಶ್ವರ್

Update: 2016-03-10 22:41 IST

ಬೆಂಗಳೂರು, ಮಾ.10: ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ತಾನು ಹೈಕಮಾಂಡ್‌ಗೆ ಯಾವುದೇ ದೂರು ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಫಲಿತಾಂಶ, ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಡೆ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಜೊತೆ ಸಮಾಲೋಚನೆ ನಡೆಸಿದ್ದೇನೆಯೇ ಹೊರತು, ಯಾವುದೇ ದೂರು ನೀಡಿಲ್ಲ ಎಂದರು.
ದುಬಾರಿ ಕೈಗಡಿಯಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಮಂಡಲದ ಉಭಯ ಸದನಗಳಲ್ಲಿ ಸಮರ್ಪಕವಾಗಿ ಉತ್ತರ ನೀಡಿದ್ದಾರೆ. ಅಲ್ಲದೆ, ಕೈಗಡಿಯಾರ ಸಚಿವ ಸಂಪುಟ ಸಭಾಭವನ ಸೇರಿದೆ. ಈ ವಿಷಯವನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.
ದೇಶದ ಎಲ್ಲ ರಾಜ್ಯಗಳಲ್ಲಿರುವ ಕಾಂಗ್ರೆಸ್ ಕಚೇರಿಗಳನ್ನು ಎಐಸಿಸಿ ಆಸ್ತಿಗಳನ್ನಾಗಿ ಪರಿಗಣಿಸಲು ಹೈಕಮಾಂಡ್ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ನಮಗೆ ಬಂದಿರುವ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಸಂಬಂಧಿಸಿದ ದಾಖಲೆ ಪತ್ರ ಗಳನ್ನು ಹಸ್ತಾಂತರಿಸುವ ಉದ್ದೇಶದಿಂದ ನಾನು ದಿಲ್ಲಿಗೆ ಹೋಗಿದ್ದೆ ಎಂದು ಅವರು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗೆ ಹೈಕಮಾಂಡ್ ತೃಪ್ತಿ ವ್ಯಕ್ತಪಡಿಸಿದೆ. 10 ಜಿಲ್ಲಾ ಪಂಚಾಯಿತಿಗಳಲ್ಲಿ ನಾವು ಸ್ವಂತ ಬಲದಲ್ಲಿ ಅಧಿಕಾರ ನಡೆಸುತ್ತೇವೆ. ಇನ್ನು ಕೆಲವು ಕಡೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ. ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಕೆಪಿಸಿಸಿಗೆ ಹೊಸ ಅಧ್ಯಕ್ಷ:  ಕೆಪಿಸಿಸಿ ಅಧ್ಯಕ್ಷನಾಗಿ ನಾನು ಈಗಾಗಲೆ ಐದೂವರೆ ವರ್ಷ ಪೂರೈಸಿದ್ದೇನೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಹೈಕಮಾಂಡ್ ಯಾವುದೇ ಚರ್ಚೆಯನ್ನು ಮಾಡಿಲ್ಲ. ಒಂದು ವೇಳೆ ನನ್ನನ್ನು ಮುಂದುವರಿಯುವಂತೆ ಸೂಚಿಸಿದರೆ, ಬಹುಶಃ ನನ್ನ ಮುಂದೆ ಅಧ್ಯಕ್ಷ ಅಥವಾ ಸಚಿವ ಸ್ಥಾನ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಆಯ್ಕೆ ಇಡಬಹುದು ಎಂದು ಅವರು ಹೇಳಿದರು.
ಪೊಲೀಸ್ ಗೃಹ ಯೋಜನೆ: ಪೊಲೀಸ್ ಗೃಹ ಯೋಜನೆಯಡಿಯಲ್ಲಿ ಕಾನ್ಸ್‌ಟೇಬಲ್ ಹಾಗೂ ಎಸ್ಸೈಗಳಿಗೆ 11 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂ. ಅಗತ್ಯವಿದ್ದು, ಈ ಸಂಬಂಧ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಮುಂದಿನ ಬಜೆಟ್‌ನಲ್ಲಿ ಈ ಘೋಷಣೆ ಬರಬಹುದು. ಒಂದು ಸಾವಿರ ಕೋಟಿ ರೂ.ಗಳನ್ನು ಏಕಕಾಲಕ್ಕೆ ನೀಡಲು ಸಾಧ್ಯವಾಗದಿದ್ದರೆ 500 ಕೋಟಿ ರೂ.ಸಾಲ ಪಡೆಯಲು ಸರಕಾರದ ಖಾತ್ರಿ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ನಾಲ್ಕೈದು ವರ್ಷಗಳಲ್ಲಿ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಒಂದು ಲಕ್ಷ ಹುದ್ದೆಗಳು ಮಂಜೂರಾಗಿದೆ. ಈ ಪೈಕಿ 75 ಸಾವಿರ ಭರ್ತಿಯಾಗಿದ್ದು, 25 ಸಾವಿರ ಖಾಲಿಯಿದೆ. ಪ್ರತಿ ವರ್ಷ 3-4 ಸಾವಿರ ಮಂದಿ ನಿವೃತ್ತಿಯಾಗುತ್ತಿರುತ್ತಾರೆ. ಪ್ರಸ್ತುತ ಎಂಟು ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಆಪರೇಷನ್ ಹಸ್ತ ಮಾಡಲ್ಲ: ಅತಂತ್ರ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಆಪರೇಷನ್ ಹಸ್ತ ಮಾಡುವುದಿಲ್ಲ. ಹೊಸ ಕಾಯ್ದೆ ಪ್ರಕಾರ ಪಕ್ಷಾಂತರ ಮಾಡುವವರು ತಮ್ಮ ಸದಸ್ಯತ್ವವನ್ನೆ ಕಳೆದುಕೊಳ್ಳುತ್ತಾರೆ. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪ ಮಾಡುವಾಗ ಇದನ್ನು ಗಮನಿಸಬೇಕು ಎಂದು ಅವರು ತಿರುಗೇಟು ನೀಡಿದರು.
ಬಜೆಟ್ ನಂತರ ನೇಮಕಾತಿ: ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯಗೊಂಡ ನಂತರ ನಿಗಮ, ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರನ್ನು ನೇಮಕ ಮಾಡಲಾಗುವುದು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟದ್ದು, ಅವರು ಈ ಸಂಬಂಧ ತೀರ್ಮಾನ ಕೈಗೊಂಡ ನಂತರ ನನ್ನ ಜೊತೆ ಚರ್ಚೆ ನಡೆಸುತ್ತಾರೆ ಎಂದು ಪರಮೇಶ್ವರ್ ಹೇಳಿದರು.

 ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಸಿಐಡಿಯಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಹತ್ಯೆ ನಡೆದ ಸ್ಥಳದಲ್ಲಿ ಯಾವುದೆ ಸಾಕ್ಷಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನ ತಡವಾಗುತ್ತಿದೆ. ವಿಚಾರವಾದಿಗಳಾದ ಗೋವಿಂದ ಪನ್ಸಾರೆ ಹಾಗೂ ನರೇಂದ್ರ ದಾಬೋಲ್ಕರ್ ಹತ್ಯೆಗೆ ಬಳಸಲಾದ ಗುಂಡು(ಬುಲೆಟ್)ಗಳಿಗೂ ಕಲಬುರ್ಗಿ ಹತ್ಯೆಗೆ ಬಳಸಲಾದ ಗುಂಡಿಗೂ ಸಾಮ್ಯತೆಯಿರುವ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ.
ಡಾ.ಜಿ.ಪರಮೇಶ್ವರ್, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News