×
Ad

ಚಿತ್ರನಟ ದರ್ಶನ್ ದಾಂಪತ್ಯದಲ್ಲಿ ಬಿರುಕು

Update: 2016-03-10 22:42 IST

ಬೆಂಗಳೂರು, ಮಾ. 10: ಚಿತ್ರನಟ ದರ್ಶನ್ ದಾಂಪತ್ಯದಲ್ಲಿ ಮತ್ತೊಮ್ಮೆ ಬಿರುಕು ಕಾಣಿಸಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ದಾಂಪತ್ಯದಲ್ಲಿ ಒಡಕು ಉಂಟಾಗಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಈ ಮಧ್ಯೆ ಇಲ್ಲಿನ ಹೊಸಕೆರೆಹಳ್ಳಿಯಲ್ಲಿ ಪತ್ನಿ ವಾಸವಿದ್ದ ವಸತಿ ಸಮುಚ್ಚಯಕ್ಕೆ ಮಾ.9ರಂದು ತೆರಳಿದ ದರ್ಶನ್ ಅಲ್ಲಿನ ಭದ್ರತಾ ಸಿಬ್ಬಂದಿಯ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.
ಈ ಸಂಬಂಧ ಇಲ್ಲಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಪೊಲೀಸರಿಗೆ ಪತ್ನಿ ವಿಜಯಲಕ್ಷ್ಮೀ ಹಾಗೂ ಭದ್ರತಾ ಸಿಬ್ಬಂದಿ ನಾಗರಾಜ್ ಎಂಬವರು ದೂರು ನೀಡಿದ್ದಾರೆ. ‘ನನ್ನ ಪತಿಗೆ ಬುದ್ಧಿ ಹೇಳಿ’ ಎಂದು ವಿಜಯಲಕ್ಷ್ಮೀ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಚಿತ್ರನಟ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಮೊದಲು ಈ ಬಗ್ಗೆ ಪರಿಶೀಲಿಸಲು ಉಭಯರನ್ನು ಪೊಲೀಸ್ ಠಾಣೆಗೆ ಕರೆಸಿ ಸಮಾಲೋಚನೆ ನಡೆಸಿದ ಬಳಿಕ ಎಫ್‌ಐಆರ್ ದಾಖಲಿಸಲಾಗುವುದೆಂದು ಉಪ ಪೊಲೀಸ್ ಆಯುಕ್ತ ಲೋಕೇಶ್ ತಿಳಿಸಿದ್ದಾರೆ.
ಬಾಯ್ ಫ್ರೆಂಡ್: ಈ ನಡುವೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ದರ್ಶನ್ ನನ್ನ ಪತ್ನಿಗೆ ಬಾಯ್‌ಫ್ರೆಂಡ್ ಇದ್ದು, ತಾನು ನನ್ನ ಪತ್ನಿ ಹಾಗೂ ಪುತ್ರನಿಗೆ ನೀಡಿದ್ದ ಕಾರನ್ನು ಆಕೆ ತನ್ನ ಸ್ನೇಹಿತನಿಗೆ ನೀಡಿದ್ದಾಳೆ ಎಂದು ಆರೋಪಿಸಿದ್ದು, ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದೆ.
ಪತ್ನಿ ಸವಾಲು: ನನ್ನ ವಿರುದ್ಧ ಪತಿ ದರ್ಶನ್ ಸುಳ್ಳು ಆರೋಪ ಮಾಡುತ್ತಿದ್ದು, ತಾಕತ್ತಿದ್ದರೆ ನನ್ನ ಬಾಯ್ ಫ್ರೆಂಡ್ ಯಾರು ಎಂಬುದನ್ನು ಸಾಬೀತುಪಡಿಸಲಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಸವಾಲು ಹಾಕಿದ್ದಾರೆ. ಸುಳ್ಳು ಆರೋಪ ಮಾಡಿರುವ ವ್ಯಕ್ತಿತ್ವ ನನ್ನದಲ್ಲ. ನಾನು ಏನೆಂದು ಎಲ್ಲರಿಗೂ ಗೊತ್ತಿದೆ. ಒಂದೂವರೆ ವರ್ಷದಿಂದ ನಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ನಾನು ಮನೆಯಿಂದ ಬರುವಾಗ ಆಡಿ ಕಾರು ಜೊತೆಗೆ ತಂದಿದ್ದೆ ಎಂದು ಸ್ಪಷ್ಟಣೆ ನೀಡಿದ್ದಾರೆ.
ನನ್ನ ಮತ್ತು ನನ್ನ ಪುತ್ರನ ಸುರಕ್ಷತೆ ಮುಖ್ಯ. ಹೀಗಾಗಿ ನಿನ್ನೆ ವಸತಿ ಸಮುಚ್ಚಯದ ಬಳಿ ಬಂದು ದರ್ಶನ್ ಗಲಾಟೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ನಟ ದರ್ಶನ್ ವಿರುದ್ಧ ಬೇರೆ ಯಾವುದೇ ಆರೋಪಗಳನ್ನು ತಾನು ಮಾಡಿಲ್ಲ ಎಂದು ವಿಜಯಲಕ್ಷ್ಮೀ ಸುದ್ದಿವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಲಾವಕಾಶ: ನಟ ದರ್ಶನ್ ಮಹಿಳಾ ಆಯೋಗದ ಮುಂದೆ ಹಾಜರಾಗಲು ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ದಿನ ಕಾಲಾವಕಾಶ ಕೋರಿದ್ದಾರೆ ಎಂದು ಗೊತ್ತಾಗಿದೆ. ಈ ಸಂಬಂಧ ಇಲ್ಲಿನ ಚೆನ್ನಮ್ಮನ ಕೆರೆ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

 ದರ್ಶನ್ ವಿಜಯಲಕ್ಷ್ಮೀ ಪ್ರಕರಣ ದಾಖಲು: ಮಂಜುಳಾ ಮಾನಸ
ಮಂಗಳೂರು, ಮಾ. 10: ಚಲನಚಿತ್ರ ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ಕುಟುಂಬದಲ್ಲಿ ಬಂದಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು (ಸುಮೊಟೊ) ದಾಖಲಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಮತ್ತು ವಿಜಯಲಕ್ಷ್ಮೀ ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಅದರಂತೆ ಇನ್ನು 2-3 ದಿನಗಳಲ್ಲಿ ದಂಪತಿಯ ಕೌನ್ಸೆಲಿಂಗ್ ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ ಮೊದಲು ಕೌನ್ಸೆಲಿಂಗ್ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈಗ ಆಯೋಗದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಇದಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ಯಾವುದೇ ಸಾಮಾನ್ಯ ಮಹಿಳೆಗೆ ಅನ್ಯಾಯವಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿ, ಆಗದಿರಲಿ, ಮಹಿಳಾ ಆಯೋಗಕ್ಕೆ ಸುಮೊಟೊ ಆ್ಯಕ್ಷನ್ ಜಾರಿಗೊಳಿಸುವ ಅಧಿಕಾರವಿದೆ. ದರ್ಶನ್ ಸೆಲೆಬ್ರಿಟಿ ಎನ್ನುವ ಕಾರಣಕ್ಕಾಗಿ ಸುಮೊಟೋ ಕ್ರಮ ಕೈಗೊಂಡಿದ್ದಲ್ಲ ಎಂದು ಅವರು ಹೇಳಿದರು.
ದರ್ಶನ್ ಮತ್ತು ವಿಜಯಲಕ್ಷ್ಮೀ ನನ್ನೊಂದಿಗೆ ಮಾತನಾಡಿದ್ದಾರೆ. ಮಗನ ಮೇಲಿನ ಪ್ರೀತಿ ಮತ್ತು ಪತಿಯ ವರ್ಚಸ್ಸಿನ ಕುರಿತು ಕಾಳಜಿ ಇರುವುದರಿಂದ ಮಹಿಳಾ ಆಯೋಗದ ಎದುರು ಹಾಜರಾಗಲು 2-3 ದಿನಗಳ ಕಾಲಾವಕಾಶ ಬೇಕು ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ದರ್ಶನ್ ಕೂಡ ಕರೆ ಮಾಡಿ, ನನ್ನ ಮಗನನ್ನು ನೋಡಲು ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆ. ಆದರೆ ಅಲ್ಲಿಗೆ ಹೋಗಲು ಅವಕಾಶ ನೀಡದಿರುವುದರಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಮೊದಲು ವಿಜಯಲಕ್ಷ್ಮಿ ಮಾತನಾಡಲಿ, ಅನಂತರ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಅದು ತಪ್ಪೇ. ವಿಜಯಲಕ್ಷ್ಮಿ ಅವರು ವಿನಾಕಾರಣ ದೂರು ನೀಡಿದ್ದರೂ ಅದು ತಪ್ಪೇ. ಇಬ್ಬರೊಂದಿಗೆ ಕೌನ್ಸೆಲಿಂಗ್ ನಡೆಸಿದ ಬಳಿಕ ಪ್ರಕರಣವನ್ನು ಇತ್ಯರ್ಥಪಡಿಸುವ ಕೆಲಸವನ್ನು ಮಹಿಳಾ ಆಯೋಗದ ಮೂಲಕ ನಡೆಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News