‘ಯುನಾನಿ’ ಅಕ್ರಮ: ಅಮಾನತು
ಬೆಂಗಳೂರು, ಮಾ.10: ಆಯುಷ್ ಇಲಾಖೆಯ ಸರಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಅಕ್ರಮ ಪ್ರವೇಶ, ಪರೀಕ್ಷಾ ಅಕ್ರಮ, ಅಕ್ರಮ ಶಿಷ್ಯವೇತನ ಪಾವತಿ ಸೇರಿದಂತೆ ಇನ್ನಿತರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ ಯಾಗಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ.
ದ್ವಿತೀಯ ದರ್ಜೆ ಸಹಾಯಕಿ ಮೀನಾಕ್ಷಿ ಟಿ.ಎ. ಹಾಗೂ ಯುನಾನಿ ವೈದ್ಯಕೀಯ ಮಹಾವಿದ್ಯಾಲಯದ ಬೆರಳಚ್ಚು ಗಾರ್ತಿ ನರಸಮ್ಮ ವಿ. ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರಕಾರಿ ಸೇವೆಯಿಂದ ಅಮಾ ನತುಗೊಳಿಸಲಾಗಿದೆ. ಅಲ್ಲದೆ, ಅಮಾನತಿನ ಅವಧಿ ಯಲ್ಲಿ ಇವರಿಬ್ಬರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡಬಾರದು, ತಮ್ಮ ಅಮಾನತಿನ ಅವಧಿಯಲ್ಲಿ ರಾಜ್ಯ ನಾಗರಿಕ ಸೇವಾ ನಿಯಮಾವಳಿಯ ನಿಯಮ 98ರನ್ವಯ ಜೀವನಾಧಾರ ಭತ್ತೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.