×
Ad

ಲತಾ ರಜನಿಕಾಂತ್ ವಿರುದ್ಧದ ಪ್ರಕರಣ ರದ್ದು: ಹೈಕೋರ್ಟ್

Update: 2016-03-10 22:43 IST

ಬೆಂಗಳೂರು, ಮಾ.10: ಬಹುಭಾಷಾ ಚಿತ್ರ ನಟ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ವಿರುದ್ಧ ವಂಚನೆ ಆರೋಪದಲ್ಲಿ ನಡೆಯುತ್ತಿದ್ದ ತನಿಖೆ ಮತ್ತು ಅಧೀನ ನ್ಯಾಯಾಲಯದಲ್ಲಿನ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
 ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಲತಾ ರಜನಿಕಾಂತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಡಿ.ವೈಂಗಣ್ಕರ್ ಅವರಿದ್ದ ನ್ಯಾಯಪೀಠ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಪಡಿಸಿದೆ.
ಹಿನ್ನೆಲೆ ಏನು:     ಕೊಚ್ಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ಗಾಗಿ ಆ್ಯಡ್ ಬ್ಯೂರೋ ಎಂಬ ಸಂಸ್ಥೆಯಿಂದ ಚಿತ್ರದ ನಿರ್ಮಾಪಕ ಮುರಳಿಮೋಹನ್ ಸುಮಾರು 35 ಕೋಟಿ ರೂ. ಸಾಲ ನೀಡುವಂತೆ ಕೇಳಿದ್ದು, ಇದಕ್ಕೆ ಶ್ಯೂರಿಟಿಯನ್ನು ಲತಾ ರಜನಿಕಾಂತ್ ಹಾಕುವುದಾಗಿ ತಿಳಿಸಿದ್ದರು.
   ಆದರೆ, ಆ್ಯಡ್ ಬ್ಯೂರೋ ಸಂಸ್ಥೆ ಶ್ಯೂರಿಟಿ ನೀಡುವುದಕ್ಕಾಗಿ ಪಬ್ಲಿಷರ್ಸ್ ಆ್ಯಂಡ್ ಬ್ರಾಡ್ ಕಾಸ್ಟಿಂಗ್ ವೆಲ್ಫೇರ್ ಅಸೋಸಿಯೇಶನ್ ಆಫ್ ಇಂಡಿಯಾ ಎಂಬ ಹೆಸರಿರುವ ಲೆಟರ್ ಹೆಡ್‌ನಲ್ಲಿ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಆದರೆ, ಅಂತಹ ಹೆಸರಿನ ಕಂಪೆನಿಯೇ ಇರಲಿಲ್ಲ ಎಂದು ದೂರುದಾರರು ಆರೋಪಿಸಿದ್ದರು.
      ಕೊಚ್ಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಿರ್ವಹಿಸಿದ ಆಡ್ ಬ್ಯೂರೋ ಎಂಬ ಕಂಪೆನಿಗೆ ಹಿಂದಿರುಗಿಸಬೇಕಾಗಿದ್ದ ಬಾಕಿ ಹಣ ಮರೆಮಾಚುವುದಕ್ಕಾಗಿ ಈ ರೀತಿ ನಕಲಿ ದಾಖಲೆ ಸೃಷ್ಟಿಯಾಗಿದೆ ಎಂದು ಆರೋಪಿಸಿ ಆ್ಯಡ್‌ಬ್ಯೂರೋ ಕಂಪೆನಿಯ ಮುಖ್ಯಸ್ಥ 8ನೆ ಹೆಚ್ಚುವರಿ ಸೆಷನ್ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ ನ್ಯಾಯಾಲಯದ ನಿರ್ದೇಶನದಂತೆ ಹಲಸೂರ್ ಗೇಟ್ ಪೊಲೀಸರು ಲತಾ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಲತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News