×
Ad

ಮಾ.12ರಿಂದ ದಕ್ಷಿಣ ಭಾರತ ರಾಜ್ಯಗಳ ಎನ್‌ಜಿಒ ಸಮಾವೇಶ

Update: 2016-03-10 22:46 IST

ಬೆಂಗಳೂರು, ಮಾ.10: ಸಿಗ್ಮಾ ಫೌಂಡೇಷನ್ ಹಾಗೂ ಲೀಡ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಮಾ.12 ಹಾಗೂ 13ರಂದು ನಗರದ ಖಾಸಗಿ ಹೊಟೇಲ್‌ನಲ್ಲಿ ದಕ್ಷಿಣ ಭಾರತ ರಾಜ್ಯಗಳ ಸ್ವಯಂಸೇವಾ ಸಂಸ್ಥೆ(ಎನ್‌ಜಿಒ)ಗಳ ಸಮಾವೇಶ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಗ್ಮಾ ಫೌಂಡೇಷನ್ ಅಧ್ಯಕ್ಷ ಅಮೀನ್ ಮುದಸ್ಸರ್, ರಾಷ್ಟ್ರ ನಿರ್ಮಾಣದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಕುರಿತು ಈ ಸಮಾವೇಶ ನಡೆಯಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 350 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಶನ್ ಅಧ್ಯಕ್ಷ ರಾಮ್‌ಜೀ ರಾಘವನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷೆ ಬಲ್ಕೀಸ್‌ಬಾನು, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಅಕ್ರಮ್ ಪಾಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಾಮಾಜಿಕ ನಾಯಕ ಪ್ರಶಸ್ತಿ-2016: ಹೈದರಾಬಾದ್‌ನಲ್ಲಿ ಪ್ರತಿನಿತ್ಯ ಸುಮಾರು 200 ಬಡವರಿಗೆ ಉಚಿತ ಆಹಾರ ಪೂರೈಕೆ ಮಾಡುತ್ತಿರುವ ಸಾನಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಝರ್ ಮಖ್ಸೂಸಿ, ಔರಂಗಾಬಾದ್‌ನಲ್ಲಿ ಬಡವರಿಗಾಗಿ ರೋಟಿ ಬ್ಯಾಂಕ್ ಹಾಗೂ ಕಪಡಾ ಬ್ಯಾಂಕ್(ಆಹಾರ ಮತ್ತು ಉಡುಪು) ನಡೆಸುತ್ತಿರುವ ಯೂಸುಫ್ ಮುಖಾತಿ.
ಅಲ್ಲದೆ, ಚೆನ್ನೈನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಗರ್ಭಿಣಿ ಸ್ತ್ರೀಯೊಬ್ಬರನ್ನು ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಸುರಕ್ಷಿತವಾಗಿ ಹೆರಿಗೆ ಆಗುವಂತೆ ಶ್ರಮಿಸಿದ ಮುಹಮ್ಮದ್ ಯೂನುಸ್‌ರನ್ನು ‘ಸಾಮಾಜಿಕ ನಾಯಕ-2016’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಮೊದಲ ದಿನ ಸ್ವಯಂ ಸೇವಾ ಸಂಸ್ಥೆಗಳಿಗಾಗಿ ಸರಕಾರದ ಯೋಜನೆಗಳು ಹಾಗೂ ಅನುದಾನ, ಮಾಹಿತಿ ಹಕ್ಕು ಕಾಯ್ದೆ ಯನ್ನು ಸಾಮಾಜಿಕ ಅಭಿವೃದ್ಧಿಗೆ ಸ್ವಯಂ ಸೇವಾ ಸಂಸ್ಥೆಗಳು ಹೇಗೆ ಬಳಸಬಹುದು ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಎರಡನೆ ದಿನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಬಳಕೆ, ಸಮುದಾಯದ ಅಭಿವೃದ್ಧಿಗೆ ಮಸೀದಿಗಳನ್ನು ಕೇಂದ್ರಗಳನ್ನಾಗಿಸುವುದು, ಮದ್ರಸಾ ವಿದ್ಯಾರ್ಥಿಗಳು ಹಾಗೂ ಇಂಗ್ಲಿಷ್ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಬ್ಯಾರಿ ಸಮೂಹದ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಎಚ್‌ಬಿಎಸ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ತಾಹಾ ಮತೀನ್ ಮತ್ತಿತರರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೀಡ್ ಟ್ರಸ್ಟ್ ಅಧ್ಯಕ್ಷ ಅಶ್ರಫ್ ಅಲಿ, ಅಬ್ದುಲ್ ಹಫೀಝ್, ಮಾಧ್ಯಮ ಸಂಚಾಲಕ ತನ್ವೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News