ನ್ಯಾಯಾಧೀಶರ ಬದಲಾವಣೆಗೆ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು, ಮಾ.26: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣದ ಕುರಿತಂತೆ ವಿಚಾರಣೆ ನಡೆಸುತ್ತಿರುವ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ವಿಚಾರಣಾ ಪ್ರಕ್ರಿಯೆ ಅತೃಪ್ತಿಕರವಾಗಿದ್ದು, ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾ ಯಿಸಬೇಕು ಎಂದು ಕೋರಿ ಪ್ರೇಮಲತಾ ದಿವಾಕರ್ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪಬ್ಲಿಕ್ ಪ್ರಾಸಿಕ್ಯೂಷನ್ ಅಧಿಕಾರಿಗಳು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ವಿಚಾರಣೆ ಅತೃಪ್ತಿಕರವಾಗಿದೆ ಎಂದು ಯಾವುದೆ ವರದಿಯನ್ನು ನೀಡದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿತು. ಆರೋಪಕ್ಕೆ ಒಳಗಾಗಿರುವ ಸ್ವಾಮೀಜಿಗಳು ನಿರೀಕ್ಷಣಾ ಜಾಮೀನು ಮಂಜೂರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿ 30 ದಿನಗಳ ಕಾಲ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿತ್ತು. ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಪೊಲೀಸ್ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರೂ ಕೋರ್ಟ್ ಪರಿಗಣಿಸಿರಲಿಲ್ಲ. ವಿಚಾರಣೆ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಘ ವೇಶ್ವರ ಶ್ರೀಗಳು ಪ್ರಕರಣದಿಂದ ಮುಕ್ತಿಗೊಳಿಸುವಂತೆ ಅರ್ಜಿ ಸಲ್ಲಿಸಿದರೆ ಪುರಸ್ಕರಿಸುವುದಾಗಿ ಮೌಖಿಕವಾಗಿ ಹೇಳುತ್ತಾರೆ. ಅತ್ಯಾಚಾರ ಆರೋಪದಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆ ಮತ್ತು ಸಾಕ್ಷಿಗಳನ್ನು ಒದಗಿಸಲು ಅವಕಾಶವಿದೆ. ಆದರೆ, ನಿತ್ಯಾನಂದ ಶ್ರೀಗಳ ರೀತಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ನಿಮ್ಮನ್ನು ಒಳಪಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಧೀಶರು ವಿಚಾರಣೆ ಸಂದರ್ಭದಲ್ಲಿ ಆರೋಪಿಗೆ ಹೇಳುತ್ತಾರೆ. ಈ ಅಂಶಗಳ ಅನ್ವಯ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಾಗುವುದಿಲ್ಲ ಎಂಬ ಸಂಶಯಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಅಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತಹ ಪ್ರಕರಣಗಳನ್ನು ಮಹಿಳಾ ನ್ಯಾಯಾಧೀಶರೇ ವಿಚಾರಣೆ ನಡೆಸಬೇಕು ಎಂಬ ನಿಯಮವಿದೆ. ಬೆಂಗಳೂರಿನಲ್ಲಿ ಸಾಕಷ್ಟು ಮಹಿಳಾ ನ್ಯಾಯಾಧೀಶರಿದ್ದು, ವಿಚಾರಣೆಯನ್ನು ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.