1,500 ಆ್ಯಂಬುಲೆನ್ಸ್ ಸಿಬ್ಬಂದಿ ವಜಾ: ‘ಮನವಿ ಮಾಡಿಕೊಂಡರೂ ಬಂದಿಲ್ಲ’
ಬೆಂಗಳೂರು, ಮಾ. 11: ಕರ್ತವ್ಯಕ್ಕೆ ಹಾಜರಾಗುವಂತೆ ಐದು ಬಾರಿ ಮನವಿ ಮಾಡಿಕೊಂಡರೂ ಅದಕ್ಕೆ ಸ್ಪಂದಿಸದ ಕಾರಣ 1,500 ಕರ್ತವ್ಯನಿರತ 108 ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಜಿವಿಕೆ ಸಂಸ್ಥೆ ವಜಾಗೊಳಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಮುಖ್ಯ ನಿರ್ದೇಶಕ ಕೃಷ್ಣಂ ರಾಜು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿರುವ ಜಿವಿಕೆ ಸಂಸ್ಥೆಯ 108 ಆ್ಯಂಬುಲೆನ್ಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ನಿರತರಾಗಿದ್ದು, ಈ ಹಿನ್ನೆಲೆಯಲ್ಲಿ 1,500 ಸಿಬ್ಬಂದಿಗೆ ಸಂಸ್ಥೆಯೂ ಐದು ಬಾರಿ ನೋಟಿಸ್ ಕಳುಹಿಸಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸದ ಕಾರಣ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾನೂನಿನ ಪ್ರಕಾರ ಕರ್ತವ್ಯಕ್ಕೆ ಹಾಜರಾಗದೇ ಇರುವ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದ ಅವರು, ಒಟ್ಟು 278 ಜನ ಸಿಬ್ಬಂದಿಯ ಪೊಲೀಸ್ ಪ್ರಕರಣಗಳು ಇರುವುದರಿಂದ ಅವರುಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ತುರ್ತು ಸೇವೆಗೆ ಯಾವುದೇ ತೊಂದರೆ ಉಂಟಾಗದಂತೆ ವಿವಿಧ ಇಲಾಖೆಗಳಿಂದ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 750ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳು ಸೇವೆ ಸಲ್ಲಿಸುತ್ತಿವೆ. ಸಿಬ್ಬಂದಿಯು ಸಂಬಳ ಹೆಚ್ಚಳ ಮಾಡುವಂತೆ ಪ್ರತಿಭಟನೆ ನಡೆಸಿದರು. ಕಾರ್ಮಿಕ ಇಲಾಖೆಯ ನಿಯಮಾವಳಿಯ ಪ್ರಕಾರ ಸಿಬ್ಬಂದಿಗೆ ಸಂಬಳವನ್ನು ಹೆಚ್ಚಳ ಮಾಡಲಾಗಿದೆ ಎಂದರು. ರಾಷ್ಟ್ರದಲ್ಲಿ ಉತ್ತಮಸೇವೆ ನೀಡುವ ಮೂಲಕ ಸಾವಿರಾರು ಜನರ ಜೀವ ರಕ್ಷಣೆ ಮಾಡಿರುವ ಸಂಸ್ಥೆಯಲ್ಲಿ ರಾಜಕೀಯ ಮಾಡುವ ಮೂಲಕ ಸಿಬ್ಬಂದಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿಯ ಪ್ರಾಣರಕ್ಷಣೆ ಮಾಡಲಾಗುತ್ತಿದೆ. ಸಾವಿರಾರು ಹೆರಿಗೆಗಳು ಆ್ಯಂಬುಲೆನ್ಸ್‌ಮೂಲಕ ಮಾಡಿಸಲಾಗಿದೆ. ಅಲ್ಲದೆ, ಸರಕಾರಿ ಆಂಬ್ಯುಲೆನ್ಸ್‌ಗಿಂತ ಹೆಚ್ಚು ಭದ್ರತೆ ನೀಡಲಾಗಿದೆ ಎಂದು ತಿಳಿಸಿದರು. ಸಿಐಟಿಯು ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಅವರು, ಸಿಐಟಿಯುನ ಬೇಡಿಕೆಗಳು ಹತ್ತು ಇಲಾಖೆಗಳಿಗೆ ಸಂಬಂಧಪಟ್ಟಿವೆ. ಹೀಗಾಗಿ, ಶೀಘ್ರದಲ್ಲಿಯೇ ಇಲಾಖೆವಾರು ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕಾರ್ಮಿಕರ ಹೋರಾಟಗಳಿಗೆ ಯಾವುದೇ ರೀತಿಯ ಟೀಕೆಗಳನ್ನು ಮಾಡುವುದಿಲ್ಲ ಎಂದ ಅವರು, ಕನಿಷ್ಠ 18 ಸಾವಿರ ರೂ. ವೇತನ ನೀಡುವಂತೆ 23 ಕಂಪೆನಿಗಳಿಗೆ ಈಗಾಗಲೇ ರಾಜ್ಯ ಸರಕಾರ ಆದೇಶ ನೀಡಿದೆ. ಆದರೆ, ಕಂಪೆನಿಗಳು ಆದೇಶ ಸರಿಯಿಲ್ಲ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿವೆ. ಆದರೂ, ಕಾರ್ಮಿಕರು ಆತಂಕ ಪಡುವ ಆವಶ್ಯಕತೆಯಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಕೀಲರನ್ನು ನೇಮಿಸಲಾಗುವುದೆಂದು ಹೇಳಿದರು.
ಸಚಿವರ ವಿರುದ್ಧ ಆಕ್ರೋಶ..!
ಎರಡು ವರ್ಷಗಳ ಹಿಂದೆಯೇ ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಸಿಐಟಿಯು ಪ್ರತಿಭಟನೆಯಲ್ಲಿ ಪಾಲ್ಗೊಂಡು ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಮತ್ತೊಮ್ಮೆ ಅದೇ ಮಾತು ಹೇಳುತ್ತಿದ್ದಾರೆ ಎಂದು ಪ್ರತಿಭಟನಾನಿರತ ಕಾರ್ಮಿಕರು ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.