‘ಆರೆಸ್ಸೆಸ್ ವಿರೋಧಿಸಿದರೆ ದೇಶದ್ರೋಹದ ಪಟ್ಟ
’ ಮಾಧ್ಯಮ ಸಂವಾದದಲ್ಲಿ ಶೆಹ್ಲಾ ರಶೀದ್
ಬೆಂಗಳೂರು, ಮಾ.11: ಸಮಾನತೆ, ಸಂವಿಧಾನ, ಅಂಬೇಡ್ಕರ್ ವಿಚಾರಗಳ ಬಗ್ಗೆ ಮಾತನಾಡಲು ದೇಶದಲ್ಲಿ ಸ್ವಾತಂತ್ರವಿಲ್ಲದಂತಾಗಿದೆ. ಆರೆಸ್ಸೆಸ್ ವಿರೋಧಿಸಿದರೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದೇ ಇಂದು ದೇಶದಲ್ಲಿ ಅಪರಾಧವಾಗಿಬಿಟ್ಟಿದೆ. ಅಸಹಾಯಕರ ಹಕ್ಕುಗಳ ಬಗ್ಗೆ ಮಾತನಾಡಿದವರಿಗೆ ದೇಶದ್ರೋಹಿಗಳೆಂಬ ಪಟ್ಟ ಕಟ್ಟುವ ಕುತಂತ್ರವನ್ನು ಆರೆಸ್ಸೆಸ್ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಹಿಂದೂ ರಾಷ್ಟ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಚಿಂತನೆಗಳನ್ನು ಬಿತ್ತುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ನಂತರ ಇದು ಹೆಚ್ಚಾಗಿದೆ. ಅಲ್ಲದೆ ಬಿಜೆಪಿ ಸರಕಾರ ಆಡಳಿತವಿರುವ ರಾಜ್ಯಗಳಲ್ಲಿ ಅದು ಕಾನೂನಾಗಿ ಮಾರ್ಪಟಿದೆ. ಈ ರಾಜ್ಯಗಳಲ್ಲಿನ ದಲಿತರ, ಅಲ್ಪಸಂಖ್ಯಾತರ ಗೋಳು ಹೇಳತೀರದಂತಾಗಿದೆ. ಇನ್ನು ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಈ ವಿಚಾರಗಳನ್ನು ಕೋಮುವಾದದ ಮೂಲಕ ಒತ್ತಡ ತರಲಾಗುತ್ತಿದೆ ಎಂದು ಆರೋಪಿಸಿದರು.
ಆರೆಸ್ಸೆಸ್ ಸಿದ್ಧಾಂತಗಳು ದೇಶದ ರಾಷ್ಟ್ರೀಯತೆಗೆ ಮಾರಕ. ದೇಶ ರಕ್ಷಣೆಯ ಹೆಸರಿನಲ್ಲಿ ಜನಸಾಮಾನ್ಯರಲ್ಲಿ ಅಸಹಿಷ್ಣುತೆ ಬಿತ್ತಲಾಗುತ್ತಿದೆ. ಇದರ ಲಾಭದಿಂದ ದೇಶದ ಸಂವಿಧಾನವನ್ನು ತಿರುಚುವ ಹುನ್ನಾರವಿದೆ ಎಂದು ಆರೋಪಿಸಿದ ಅವರು, ದೇಶದ ರಕ್ಷಣೆ ಮತ್ತು ಸಮಾನತೆಗಾಗಿ ನಿರಂತರವಾಗಿ ಕನ್ಹಯ್ಯಾ ನಾಯಕತ್ವದಲ್ಲಿ ಹೋರಾಟ ನಡೆಯಲಿದೆ ಎಂದು ಏರು ಧ್ವನಿಯಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದರು.
ಆರೆಸ್ಸೆಸ್ ಕೈವಾಡದಿಂದಲೇ ಕನ್ಹಯ್ಯೆಗೆ ಜೈಲು: ಫೆ. 9ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿಗಳ ಕುರಿತ ಭಾಷಣದಲ್ಲಿ ದೇಶದ್ರೋಹಿ ಹೇಳಿಕೆಗಳನ್ನು ಮತ್ತು ಘೋಷಣೆಗಳನ್ನು ಕನ್ಹಯ್ಯೋ ನೀಡಿಲ್ಲ. ಅಲ್ಲದೆ ಅಫ್ಝಲ್ ಗುರು ಕುರಿತು ನಾವು ಮೃದು ಧೋರಣೆಯನ್ನು ತಾಳಿಲ್ಲ. ಆದರೆ ವಿನಾಕಾರಣ ಆರೆಸ್ಸೆಸ್ ಕನ್ಹಯ್ಯೆ ಮತ್ತು ಅವರ ಸಂಗಡಿಗರ ಮೇಲೆ ಗೂಬೆ ಕೂರಿಸಿದ್ದಾರೆ. ಆರೆಸ್ಸೆಸ್ ಷಡ್ಯಂತ್ರದಿಂದಲೇ ಕನ್ಹಯ್ಯೆ ಜೈಲುವಾಸ ಅನುಭವಿಸಬೇಕಾಗಿ ಬಂತು ಎಂದು ಹೇಳಿದರು.
ಜೆಎನ್‌ಯು ಕ್ಯಾಂಪಸ್ ಒಳಗೆ ಆರೆಸ್ಸೆಸ್ ಮಧ್ಯ ಪ್ರವೇಶ ಮಾಡಿ ವಿದ್ಯಾರ್ಥಿಗಳ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಎನ್‌ಡಿಎ ಸರಕಾರ, ಮನುವಾದಿ ಸಚಿವರು ಮತ್ತು ಶಾಸಕರು ಇನ್ನಷ್ಟು ಪುಷ್ಟಿ ನೀಡುತ್ತಿದ್ದಾರೆ. ಇದರಲ್ಲಿ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಸಂವಿಧಾನದ ಮಿತಿ ಮೀರಿ ನಾವು ಹೋರಾಟ ಮಾಡಿಲ್ಲ. ದೇಶದಲ್ಲಿ ಹಲವು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಈ ಸಂಘಟನೆಗಳಲ್ಲಿ ನಮ್ಮ ಸಂಘಟನೆಯು ಒಂದು. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವುದು ತಪ್ಪಾಎಂದವರು ಪ್ರಶ್ನಿಸಿದರು.
ಕನ್ಹಯ್ಯ ಕುಮಾರ್ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಸಮಾಜ ವಾದಿ ಚಿಂತನೆಯ ಬಗ್ಗೆ ಮಾತನಾಡಿದರೆ ಸಂಘ ಪರಿವಾರ ಸಹಿಸೋದಿಲ್ಲ. ದೇಶದ ಆದಿವಾಸಿಗಳು, ಪರಿಶಿಷ್ಟರು, ಬಡವರು ಹಕ್ಕು ಕೇಳುವುದು ತಪ್ಪೇ? ಕನ್ಹಯ್ಯೆ ಕುಮಾರ್ ಕೇಳಿದ್ದು ಇದನ್ನೇ. ಇದಕ್ಕೆ ಇಷ್ಟೆಲ್ಲ ರಾದ್ಧಾಂತ ಮಾಡಲಾಗಿದೆ ಎಂದು ಕಿಡಿಕಾರಿದರು.
ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾದರೆ ಎಲ್ಲವೂ ಬಯಲಾಗುತ್ತದೆ. ಜನಪರ ಸಮಸ್ಯೆಗಳಿಗೆ ಧ್ವನಿ ಎತ್ತುತ್ತಿರುವ ಎಡಪಂಥೀಯರನ್ನು ಹತ್ತಿಕ್ಕುತ್ತಿರುವ ವಿಚಾರ ತಲೆ ತಗ್ಗಿಸುವಂಥಾದ್ದು. ಕೇಂದ್ರ ಸರಕಾರ ಹಿಟ್ಲರ್‌ನಂತೆ ನಡೆದುಕೊಳ್ಳುತ್ತಿದೆ ಎಂದು ಅವರು ವಾದಿಸಿದರು.
ಪ್ರತಿಕೂಲ ವಾತಾವರಣದಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರ ಬಗ್ಗೆ ಜೆಎನ್‌ಯು ವಿದ್ಯಾರ್ಥಿಗಳಿಗೆ ಅಪಾರ ಗೌರವ ಇದೆ. ಸೈನಿಕರು ಭಾರತ- ಪಾಕಿಸ್ತಾನಗಳ ರಾಜಕಾರಣಿಗಳ ರಾಜಕೀಯದಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅವರು ದೂರಿದರು.
ಕಾರ್ಯಕ್ರಮದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಅಕ್ಬರ್, ಸದಸ್ಯ ಮೋಹಿತ್, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮಾರುತಿ ಉಪಸ್ಥಿತರಿದ್ದರು.