ಪೌರ ಕಾರ್ಮಿಕರಿಗೆ ಗುತ್ತಿಗೆದಾರರಿಂದ 384 ಕೋಟಿ ರೂ. ವಂಚನೆ
-ಪ್ರಭಾಕರ ಟಿ. ಚೀಮಸಂದ್ರ ಬೆಂಗಳೂರು, ಮಾ.11: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ನಿವೃತ್ತಿ ನಂತರ ಆರೋಗ್ಯಜೀವನ ಭದ್ರತೆಗಾಗಿ ತಮ್ಮ ವೇತನದಲ್ಲಿ ಕಳೆದ 12 ವರ್ಷಗಳಿಂದ ಇ.ಎಸ್.ಐ(ಕಾರ್ಮಿಕರ ವಿಮೆ) ಮತ್ತು ಪಿ.ಎಫ್(ಭವಿಷ್ಯ ನಿಧಿ)ಗೆ ಸಂದಾಯ ಮಾಡಿದ್ದ ಒಟ್ಟು ಮೊತ್ತ 384 ಕೋಟಿ ರೂ.ಗಳಲ್ಲಿ ಅವರ ಖಾತೆಗೆ ಗುತ್ತಿಗೆದಾರರು ಇದುವರೆಗೆ ನಯಾ ಪೈಸೆಯನ್ನು ಸಂದಾಯ ಮಾಡದೆ ವಂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 87 ಗುತ್ತಿಗೆದಾರರ ಕೈ ಕೆಳಗೆ 12,400 ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ. ಇಎಸ್‌ಐ ಮತ್ತು ಪಿಎಫ್ ವಂತಿಕೆ ಕಡಿತ ನಿಯಮ ಗುತ್ತಿಗೆ ಪೌರ ಕಾರ್ಮಿಕರಿಗೆ 2005ರಿಂದ ಆರಂಭವಾಯಿತು. ಈ ನಿಯಮದ ಪ್ರಕಾರ ಕಾರ್ಮಿಕರ ವೇತನದಲ್ಲಿ ಕಾರ್ಮಿಕರ ವಂತಿಕೆ ಶೇ. 12 ರಷ್ಟು ಪಿಎಫ್ ಹಣ ಮತ್ತು ಗುತ್ತಿಗೆದಾರರ ವಂತಿಕೆ ಶೇ. 13.61 ರೂ. ಈ ಎರಡು ವಂತಿಕೆ ಹಣ ಸೇರಿ 25.61 ರೂ.ಗಳನ್ನು ಸೇರಿಸಿ ಸಂಬಂಧಪಟ್ಟ ಭವಿಷ್ಯ ನಿಧಿ ಕಚೇರಿಯಲ್ಲಿ ಕಾರ್ಮಿಕರ ವೈಯಕ್ತಿಕ ಖಾತೆಗೆ ಜಮಾ ಮಾಡಬೇಕು. ಅದೇ ರೀತಿಯಾಗಿ ಇಎಸ್‌ಐ ನಿಧಿಗೆ ಕಾರ್ಮಿಕರ ವಂತಿಕೆಯಲ್ಲಿ ಶೇ.1.75 ರಷ್ಟು ಮತ್ತು ಗುತ್ತಿಗೆದಾರರ ವಂತಿಕೆಯಲ್ಲಿ ಶೇ.4.75 ರಷ್ಟು ಹಣವನ್ನು ಕಾರ್ಮಿಕರ ವೈಯಕ್ತಿಕ ಖಾತೆಗೆ ಜಮೆ ಮಾಡಬೇಕು. ಆದರೆ ಕಾರ್ಮಿಕರ ವೇತನದಲ್ಲಿ 12 ವರ್ಷಗಳಿಂದ ಕಡಿತಗೊಂಡ ಇಎಸ್‌ಐ, ಪಿಎಫ್ ಹಣ ಇದುವರೆಗೂ ಅವರ ಖಾತೆಗೆ ಜಮೆ ಮಾಡದೆ ಗುತ್ತಿಗೆದಾರರು ಒಟ್ಟು 384 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎನ್ನಲಾಗಿದೆ.
ಪೌರ ಕಾರ್ಮಿಕರ ವೇತನದಲ್ಲಿ ಇಎಸ್‌ಐ ಮತ್ತ ಪಿಎಫ್ ವಂತಿಕೆ ಕಡಿತಗೊಳ್ಳುತ್ತಿರುವುದರಿಂದ ಪೌರ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದಾಗ ಆಸ್ಪತ್ರೆಗಳಲ್ಲಿ ಸುಮಾರು 15 ಲಕ್ಷ ರೂ.ಗಳವರೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ನಂಬಿಕೆಯಿಟ್ಟಿದ್ದರು. ಮತ್ತು ನಿವೃತ್ತಿ ನಂತರ ನಮ್ಮ ಜೀವನ ಭದ್ರವಾಗಲಿದೆ ಎಂದು ಭಾವಿಸಿದ್ದರು. ಆದರೆ ಈಗ ಆ ನಂಬಿಕೆ ಮತ್ತು ಭಾವನೆಗಳೆರಡು ಹುಸಿಯಾಗಿವೆ. ಇಎಸ್‌ಐ, ಪಿಎಫ್ ಕಚೇರಿಗಳತ್ತ ಮುಖ ಮಾಡಿದರೆ ಅಲ್ಲಿ ಸಿಗುವ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..
ಕಳೆದ ಫೆಬ್ರವರಿಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಬಿಬಿಎಂಪಿ ಪೌರಕಾರ್ಮಿಕರ ವಲಯವಾರು ಮೊದಲನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವ ವೇಳೆ ಬಹು ಕೋಟಿ ರೂ.ಗಳ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬಣ್ಣ ಬಯಲಾಗಿದೆ.
ನಮ್ಮ ಬೆವರಿನ ಹಣವನ್ನು ನುಂಗಲು ಅವರಿಗೆ ಹೇಗಾದರೂ ಮನಸ್ಸು ಬರುತ್ತೋ. ದೇವರು ಅವರಿಗೆ ಒಳ್ಳೆಯದು ಮಾಡೋದಿಲ್ಲ. ಅವರು ಸರ್ವ ನಾಶವಾಗುತ್ತಾರೆ. ನಾವೂ ಇನ್ನು ಎಷ್ಟು ವರ್ಷ ಕಷ್ಟ ಕೋಟಲೆಯಲ್ಲಿ ಜೀವನ ಕಳೆಯಬೇಕೋ...
-ಸರೋಜಮ್ಮ, ಪಿಎಫ್ ಹಣ ವಂಚಿತ ಪೌರ ಕಾರ್ಮಿಕರು
ಪಾಲಿಕೆಯಲ್ಲಿ ನಕಲಿ ಪೌರ ಕಾರ್ಮಿಕರು: ಸರಕಾರಕ್ಕೆ 550 ಕೋಟಿ ವಂಚನೆ
ಬಿಬಿಎಂಪಿ ವತಿಯಿಂದ 19 ಸಾವಿರ ಮಂದಿ ಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಬಿಡುಗಡೆಯಾಗುತ್ತಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 12,400 ಮಂದಿ ಮಾತ್ರ ಭೌತಿಕವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇನ್ನುಳಿದ 6600 ಮಂದಿಯನ್ನು ಅನಧಿಕೃತವಾಗಿ ಗುರುತಿಸಿ ವೇತನವನ್ನು ಪಡೆಯಲಾಗಿದೆ. ಇದರಿಂದ ಕಳೆದ 10 ವರ್ಷಗಳಿಂದ 550 ಕೋಟಿ ರೂ.ಗಳಷ್ಟು ಸರಕಾರದ ಖಜಾನೆಗೆ ನಷ್ಟವಾಗಿದೆ. ಈ ಅಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೈವಾಡವಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ದೂರುತ್ತಾರೆ.
ಸಿಐಡಿ ತನಿಖೆ..
ಇಎಸ್‌ಐ ಮತ್ತು ಭವಿಷ್ಯ ನಿಧಿ ಹಣ ವಂಚನೆ ಮತ್ತು ನಕಲಿ ಪೌರ ಕಾರ್ಮಿಕರ ಹೆಸರಿನಲ್ಲಿ ಒಟ್ಟು 934 ಕೋಟಿ ರೂ.ಗಳ ಹಗರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗುವುದು. ನಗರದಲ್ಲಿರುವ ಅಧಿಕೃತ ಪೌರ ಕಾರ್ಮಿಕರ ಸಮೀಕ್ಷೆಯನ್ನು ಮುಂದಿನ ತಿಂಗಳು ನಡೆಸಲಾಗುವುದು.
-ನಾರಾಯಣ, ಅಧ್ಯಕ್ಷ ಸಫಾಯಿ ಕರ್ಮಚಾರಿ ಆಯೋಗ
ಪೌರ ಕಾರ್ಮಿಕರ ಬದಕು ಈಗಾಗಲೇ ಅತಂತ್ರದಲ್ಲಿದೆ. ಅದರಲ್ಲಿ ಅವರ ಭವಿಷ್ಯಕ್ಕಾಗಿ ಕೂಡಿಟ್ಟಿದ್ದ ಹಣ ಬೇರೆಯವರ ಪಾಲಾದರೆ ನಮ್ಮ ಗತಿಯೇನು? ಇಎಸ್‌ಐ, ಪಿಎಫ್ ಹಣ ನುಂಗಿದವರ ವಿರುದ್ಧ ಸರಕಾರ ಕೂಡಲೆ ಕ್ರಮ ಸೂಕ್ತ ಕೈಗೊಳ್ಳಬೇಕು.
-ಆನಂದ್, ಪೌರ ಕಾರ್ಮಿಕ