ಪರ್ಯಾಯ ವ್ಯವಸ್ಥೆಯಿದ್ದರೆ ತಿಳಿಸಿ: ಸಚಿವ ಕಿಮ್ಮನೆ
ಬೆಂಗಳೂರು, ಮಾ. 11: ಶಾಲಾ ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಮೂಲಕ ಶಾಲೆಗಳಲ್ಲಿ ಶೂ ವಿತರಿಸುವ ಕ್ರಮ ಹೆಚ್ಚು ಪಾರದರ್ಶಕವಾಗಿದ್ದು, ಇದಕ್ಕೆ ಪರ್ಯಾಯವಾದ ವ್ಯವಸ್ಥೆಯಿದ್ದಲ್ಲಿ ಅದನ್ನು ಜಾರಿಗೊಳಿಸಲು ಚಿಂತನೆ ಮಾಡಲಾಗುವುದೆಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 170 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಈ ಯೋಜನೆಗೆ ಮೀಸಲಿಡಲಾಗಿತ್ತು. ಸಿಂಗಲ್ ಟೆಂಡರ್ ಕರೆದು ಗುತ್ತಿಗೆದಾರರಿಗೆ ಶೂ ವಿತರಿಸುವ ಕೆಲಸ ನೀಡುವ ಬದಲು ಅಭಿವೃದ್ಧಿ ಸಮಿತಿಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗಿದೆ. ಇನ್ನು ಮೂರು ತಿಂಗಳಲ್ಲಿ ಸಮಿತಿಗಳು ಇಲಾಖೆಗೆ ಬಿಲ್ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಕಡಿಮೆ ದರದ ಜತೆಗೆ ಗುಣಮಟ್ಟದ, ಬಾಳಿಕೆ ಬರುವ ಶೂಗಳನ್ನು ಮಕ್ಕಳಿಗೆ ನೀಡಬೇಕು. ಮುಖ್ಯ ಶಿಕ್ಷಕರ ನೇತೃತ್ವದ ಕನಿಷ್ಠ 5 ಪೋಷಕರ ಸಮಿತಿ ಸ್ಥಳೀಯ ಮಟ್ಟದಲ್ಲಿ ಶೂ ವಿತರಣೆ ಪ್ರಕ್ರಿಯೆ ನಡೆಯಲಿದೆ. ರಾಜ್ಯ ಸರಕಾರ ಕೈಗೊಂಡಿರುವ ಕ್ರಮ ಪಾರದರ್ಶಕವಾಗಿದೆ. ಇದಕ್ಕಿಂತ ಸೂಕ್ತ ವ್ಯವಸ್ಥೆ ಎಲ್ಲೂ ದೊರೆಯಲು ಸಾಧ್ಯವಿಲ್ಲ ಎಂದ ಅವರು, ಇದಕ್ಕೆ ಪರ್ಯಾಯವಾದ ವ್ಯವಸ್ಥೆಯಿದ್ದರೆ ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಸಚಿವರ ಮೇಲೆಯೇ ಕೇಳಿಬರುತ್ತದೆ. ಹೀಗಾಗಿ, ತಮ್ಮ ಮಕ್ಕಳಿಗೆ ಶೂ ಆಯ್ಕೆ ಮಾಡುವ ಅಧಿಕಾರವನ್ನು ಪೋಷಕರಿಗೇ ನೀಡಲಾಗಿದೆ. ಈ ಕ್ರಮದ ಮಾರ್ಗಸೂಚಿ ಮೀರಿದರೆ ರಾಜ್ಯ ಸರಕಾರಕ್ಕೆ ಕ್ರಮ ಕೈಗೊಳ್ಳಲು ಅಧಿಕಾರವಿದೆ ಎಂದು ಹೇಳಿದರು.
ಬೇಸಿಗೆ ಮತ್ತು ಮಳೆಗಾಲಕ್ಕೆ ಅನುಕೂಲವಾಗುವ ಸೆಮಿ ಕ್ಯಾನ್ವಾಸ್ ಶೂಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮಲೆನಾಡು ಹಾಗೂ ಬಯಲುಸೀಮೆ ಸೇರಿದಂತೆ ಎಲ್ಲ ಪ್ರದೇಶದ ಮಕ್ಕಳಿಗೆ ಇದರಿಂದ ನೆರವಾಗಲಿದೆ. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಶೂ ನೀಡುತ್ತಿರುವುದರಿಂದ ಮಕ್ಕಳಿಗೆ ಈ ವರ್ಷಾಂತ್ಯದಲ್ಲೇ ಹೊಸ ಶೂ ದೊರೆಯಲಿದೆ. ಹಳೆ ಶೂ ಸೇರಿದಂತೆ ವರ್ಷಾಂತ್ಯದಲ್ಲಿ ಮಕ್ಕಳಿಗೆ ಎರಡು ಜತೆ ಶೂ ಲಭ್ಯವಾಗಲು ಈ ಸಮಯ ಆರಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಶಿಕ್ಷಣ ಸಚಿವನಾಗಿ ಶೇ.76 ರಷ್ಟು ಸಾಧನೆ ಮಾಡಿದ್ದು, ಹಿಂದಿನ ಸಚಿವರ ಶೇ.56 ಸಾಧನೆಗಿಂತಲೂ ಇದು ಉತ್ತಮವಾಗಿದೆ. ಇಲಾಖೆಯಲ್ಲಿ ಸೂಕ್ತವಾಗಿ ಕಡತ ವಿಲೇವಾರಿಯಾಗುತ್ತಿಲ್ಲ ಎಂದು ಹಿಂದಿನ ಸಚಿವರು ಟೀಕಿಸುತ್ತಿದ್ದಾರೆ. ಆದರೆ, ನನ್ನ ಸಾಧನೆ ಶೇ.76 ರಷ್ಟಾಗಿದೆ. ಶೇ.56ಕ್ಕಿಂತ ಶೇ.76 ದೊಡ್ಡದು ಎಂಬುದು ನನಗೆ ತಿಳಿದಿದೆ ಎಂದು ಕಿಮ್ಮನೆ ಹೇಳಿದರು.
ಎ.6ಕ್ಕೆ ಚರ್ಚೆ: ಸಮೀಪದಲ್ಲಿ ಸರಕಾರಿ ಶಾಲೆಯಿದ್ದರೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಮೀಸಲು ಸೀಟು ನೀಡಲು ಸಾಧ್ಯವಿಲ್ಲ ಎಂಬ ನೀತಿ ಪಂಜಾಬ್ ರಾಜ್ಯದಲ್ಲಿದೆ ಎಂದ ಅವರು, ಎ.6 ರಂದು ರಾಜ್ಯದಲ್ಲಿರುವ ಆರ್‌ಟಿಇ ಬಗ್ಗೆ ಅಧ್ಯಯನ ಮಾಡಲು ಪಂಜಾಬ್‌ನ ಅಧಿಕಾರಿಗಳು ಬರಲಿದ್ದು, ಈ ಸಂಬಂಧ ಚರ್ಚಿಸಲಾಗುವುದು ಎಂದರು.