ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್

Update: 2016-03-11 17:35 GMT

ಬೆಂಗಳೂರು, ಮಾ.11: ಮದ್ಯ ಮಾರಾಟದ ಪರವಾನಿಗೆ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೆಲ ಷರತ್ತುಗಳನ್ನು ಸಡಿಲಿಕೆ ಮಾಡಿರುವ ಸರಕಾರದ ಕ್ರಮಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
 ಮದ್ಯಮಾರಾಟಗಾರರ ಸಂಘದ ಕಾರ್ಯದರ್ಶಿ ಗೋವಿಂದರಾಜ ಹೆಗಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠ, ಸರಕಾರದ ನಿಯಮಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಕರ್ನಾಟಕ ಮದ್ಯಮಾರಾಟ(ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ)(ತಿದ್ದುಪಡಿ) ನಿಯಮ 2014ರ ಪ್ರಕಾರ ತಿದ್ದುಪಡಿ ತಂದು 2014ರ ಜೂನ್ 9ರಂದು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಮದ್ಯಮಾರಾಟ ಪರವಾನಿಗೆ ಸಿಲ್-7 ಅನ್ನು ಪಡೆಯುವುದಕ್ಕೆ ಎಸ್ಸಿ-ಎಸ್ಟಿ ಪಂಗಡದವರಿಗೆ ಕೆಲ ಷರತ್ತುಗಳನ್ನು ಸಡಿಲಿಸಲಾಗಿದೆ.
       ಈ ಅಧಿಸೂಚನೆಯ ಪ್ರಕಾರ ಪ್ರವಾಸಿ ತಾಣಗಳಲ್ಲಿ ಮದ್ಯಮಾರಾಟ ಪರವಾನಿಗೆ ಪಡೆಯಲು ಸಾಮಾನ್ಯ ವರ್ಗಕ್ಕೆ ಕನಿಷ್ಠ 30 ಕೋಣೆಗಳ ಹೊಟೇಲ್ ಇರಬೇಕು ಎಂಬ ನಿಯಮವಿದೆ. ಆದರೆ, ಎಸ್ಸಿ-ಎಸ್ಟಿ ವರ್ಗಕ್ಕೆ 15 ಕೋಣೆಗಳ ಹೊಟೇಲ್ ಸಾಕು ಎಂಬ ನಿಯಮವಿದೆ. ಈ ತಾರತಮ್ಯ ಸರಿಯಲ್ಲ. ಹೀಗಾಗಿ, ಕರ್ನಾಟಕ(ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ)(ತಿದ್ದುಪಡಿ) ನಿಯಮ 2014ನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ, ಆರ್ಥಿಕವಾಗಿ ಹಿಂದುಳಿದಿರುವ ಎಸ್ಸಿ-ಎಸ್ಟಿ ಪಂಗಡಗಳ ಅಭಿವೃದ್ಧಿಗಾಗಿ ಸರಕಾರ ಈ ತೀರ್ಮಾನವನ್ನು ಕೈಗೊಂಡಿದೆ. ಅಲ್ಲದೆ, ಕಳೆದ 2014ರಿಂದ ಈ ನಿಯಮ ಜಾರಿಯಲ್ಲಿದ್ದು, ಈಗಾಗಲೇ 15ಕ್ಕೂ ಹೆಚ್ಚು ಪರವಾನಿಗೆಗಳನ್ನು ನೀಡಿದೆ. ಈ ಸಂದರ್ಭದಲ್ಲಿ ಅರ್ಜಿಯನ್ನು ಮಾನ್ಯ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಅರ್ಜಿಯನ್ನು ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News