ಮಾ.18ಕ್ಕೆ ರಾಜ್ಯ ಬಜೆಟ್
ಬೆಂಗಳೂರು, ಮಾ.11: ರಾಜ್ಯ ಬಜೆಟ್ ಅಧಿವೇಶನ ಮಾ.18ರಂದು ಆರಂಭಗೊಳ್ಳಲಿದ್ದು, ಆ ದಿನ ಬೆಳಗ್ಗೆ 11:30ಕ್ಕೆ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ರಾಜ್ಯ ಆಯವ್ಯಯ ಮಂಡನೆ ಮಾಡಲಿದ್ದಾರೆ.
ಹದಿನಾಲ್ಕನೆ ವಿಧಾನಸಭೆಯ ಒಂಬತ್ತನೆ ಅಧಿವೇಶನ ಮಾ.18 ರಿಂದ 31ರ ವರೆಗೆ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ. ಶನಿವಾರ, ರವಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 9 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ.
ಮಾ.18ರಂದು ಆಯವ್ಯಯ ಮಂಡನೆ ಮಾಡಲಿದ್ದು, ಆ ಬಳಿಕ ಸದನ ಮುಂದೂಡಲಾಗುತ್ತದೆ. ಮಾ.19 ಮತ್ತು 20 ಶನಿವಾರ ಮತ್ತು ರವಿವಾರ ಕಾರ್ಯ ಕಲಾಪ ಇರುವುದಿಲ್ಲ. ಮಾ.21ರ ಸೋಮವಾರದಿಂದ ಮಾ.24ರ ಗುರುವಾರದ ವರೆಗೆ ಸರಕಾರಿ ಕಾರ್ಯ ಕಲಾಪಗಳು ನಡೆಯಲಿವೆ.
ಮಾ.25, 26, 27ರಂದು ರಜಾದಿನ. ಮಾ.28ರ ಸೋಮ ವಾರದಿಂದ ಮಾ.31ರ ವರೆಗೆ ಸರಕಾರಿ ಕಾರ್ಯ ಕಲಾಪಗಳು ನಡೆಯಲಿದ್ದು, ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಇಲಾಖೆಗಳ ಮೇಲಿನ ಚರ್ಚೆ, ಪ್ರಶ್ನೋತ್ತರ ಕಲಾಪ ಹಾಗೂ ಬರ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಪ್ರಸಕ್ತ ಸಮಸ್ಯೆಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಈ ಬಾರಿ ತನ್ನ ಹನ್ನೊಂದನೆ ಆಯವ್ಯಯ ಮಂಡನೆ ಮಾಡುತ್ತಿದ್ದು, ಅತ್ಯಂತ ಹೆಚ್ಚು ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಅವರ ಬೆನ್ನಿಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ನಾಲ್ಕನೆ ಆಯವ್ಯಯ ಮಂಡನೆ ಮಾಡುತ್ತಿದ್ದಾರೆ.