ಮೈಸೂರು: ಬಜರಂಗದಳ ಮುಖಂಡನ ಕೊಲೆ
ಮೈಸೂರು, ಮಾ.13: ಬಜರಂಗದಳದ ಮುಖಂಡನೋರ್ವ ಕೊಲೆಯಾಗಿರುವ ಘಟನೆ ಮೈಸೂರು ನಗರದ ಉದಯ ಗಿರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಕ್ಯಾತಮಾರನಹಳ್ಳಿಯ ನಿವಾಸಿ ರಾಜು (30) ಕೊಲೆಯಾದ ವ್ಯಕ್ತಿ. ರವಿವಾರ ಮಧ್ಯಾಹ್ನ ಉದಯಗಿರಿಯ ಟೀ ಅಂಗಡಿಯೊಂದರಲ್ಲಿ ಕುಳಿತಿದ್ದ ರಾಜುವಿನ ಮೇಲೆ ಮೂರ್ನಾಲ್ಕು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಉದಯಗಿರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮೃತ ದೇಹವನ್ನು ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಘಟನೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಬಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಯೆದುರು ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬಂದ್‌ಗೆ ಕರೆ: ರಾಜು ಕೊಲೆಯನ್ನು ಖಂಡಿಸಿ ಮಾ. 14ರಂದು ಮೈಸೂರು ಜಿಲ್ಲಾ ಬಂದ್‌ಗೆ ಬಿಜೆಪಿ ಕರೆ ನೀಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಯಾವುದೇ ಅಡ್ಡಿಯಾಗದಂತೆ ಶಾಂತಿಯುತ ಬಂದ್ ಆಚರಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ.