ವಿಟಿಯು ಪ್ರಕರಣ: ಕುಲಪತಿ ವಿರುದ್ಧ ಹೈಕೋರ್ಟ್ ಗರಂ
ಬೆಂಗಳೂರು, ಮಾ.14: ವಿಟಿಯು ಕುಲಪತಿ ಬಿಇ, ಎಂಬಿಎ ಹಾಗೂ ಇತರ ಪದವಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯಲು ತಮಗಿಷ್ಟದಂತೆ ಸುತ್ತೋಲೆಯನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಕುಲಪತಿ ವಿರುದ್ಧ ವಾಗ್ದಾಳಿ ನಡೆಸಿ ಆದೇಶವನ್ನು ಕಾಯ್ದಿರಿಸಿದೆ. ವಿಟಿಯು ವಿವಿಯಿಂದ ತಮಗೆ ಅನ್ಯಾಯವಾಗಿದೆಯೆಂದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿದೆ.
ವಿಟಿಯು ಅಡಿಯಲ್ಲಿ ಬರುವ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳು 2009ರ ಅವಧಿಗಿಂತ ಮೊದಲು ಅನುತೀರ್ಣರಾದರೆ ಅವರಿಗೆ ಉತ್ತೀರ್ಣರಾಗಲು ಹಲವು ಬಾರಿ ಅವಕಾಶ ನೀಡಲಾಗುತ್ತಿತ್ತು.
ಆದರೆ, 2009ರ ಬಳಿಕ ಅನುತೀರ್ಣರಾದವರಿಗೆ ವಿಟಿಯು ಕುಲಪತಿ ಅವರು ತೇರ್ಗಡೆಯಾಗಲು ಕನಿಷ್ಠ 8 ವರ್ಷಗಳು ಹಾಗೂ ಗರಿಷ್ಠ 9ವರ್ಷಗಳು ಎಂಬ ಮಿತಿಯನ್ನು ಹೇರಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದರಿಂದ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದ್ದು, ಈ ಸುತ್ತೋಲೆಯನ್ನು ವಾಪಸ್ ಪಡೆಯಲು ಆದೇಶಿಸಬೇಕೆಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ವಿಟಿಯು ಕಾಯ್ದೆ(62) ಅನ್ವಯ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕನಿಷ್ಠ 8 ವರ್ಷ, ಗರಿಷ್ಠ 9 ವರ್ಷ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಆದರೆ, ಇನ್ನು ಕೆಲವರಿಗೆ ಕಾಯ್ದೆ ಅನ್ವಯ ಪರೀಕ್ಷೆ ಬರೆಯಲು ಅವಕಾಶವನ್ನೂ ನೀಡಿಲ್ಲ. ಇದರಿಂದ, ವಿದ್ಯಾರ್ಥಿಗಳಲ್ಲೇ ತಾರತಮ್ಯವನ್ನು ಹುಟ್ಟು ಹಾಕಿದಂತಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಕಾನೂನು ವಿರುದ್ಧವಾಗಿ ಯಾವುದೇ ಸುತ್ತೋಲೆಗಳನ್ನು ಹೊರಡಿಸುವಂತಿಲ್ಲ. ಹಾಗೊಂದು ಬಾರಿ ಸುತ್ತೋಲೆಯನ್ನು ಹೊರಡಿಸಿದರೂ ಅದು ಕಾನೂನಿನ ವಿರುದ್ಧವಾಗುತ್ತದೆ. ಅಲ್ಲದೆ, ಕರ್ನಾಟಕ ವಿವಿ ಕಾಯ್ದೆ ಅನ್ವಯ ಅಂತಹ ವಿವಿಗಳನ್ನು ಮುಚ್ಚುವ ಅವಕಾಶವೂ ಇದೆ ಎಂದು ಹೈಕೋರ್ಟ್ ತಿಳಿಸಿತು.
ಬೇಕಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಬೇಡದ ವಿದ್ಯಾರ್ಥಿಗಳಿಗೆ ಅವಕಾಶವನ್ನು ನಿರಾಕರಿಸುವ ಅಧಿಕಾರವನ್ನು ಕುಲಪತಿಗೆ ಯಾರು ನೀಡಿದ್ದಾರೆ ಎಂದು ಪ್ರಶ್ನಿಸಿದ ಹೈಕೋರ್ಟ್, ಕಾನೂನುಬಾಹಿರ ನಿರ್ದೇಶನಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ವಿವಿಗೆ ಸೂಚನೆಯನ್ನು ನೀಡಿತು.