ಕರ್ನಾಟಕ ರೇಷ್ಮೆ ಕೈಗಾರಿಕಾ ಸಂಸ್ಥೆಗೆ 27 ಕೋಟಿ ರೂ. ನಿವ್ವಳ ಲಾಭ

Update: 2016-03-14 17:18 GMT

ಬೆಂಗಳೂರು, ಮಾ. 14: ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಕರ್ನಾಟಕ ರೇಷ್ಮೆ ಕೈಗಾರಿಕಾ ಸಂಸ್ಥೆ ಕಳೆದ ವರ್ಷ ಒಟ್ಟು 147 ಕೋಟಿ ರೂ. ವ್ಯಾಪಾರ ವಹಿವಾಟು ನಡೆಸಿ, 27 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಬಸವರಾಜು ತಿಳಿಸಿದ್ದಾರೆ.

ಸೋಮವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಕೆಎಸ್‌ಐಸಿ ಮೈಸೂರು ಸೀರೆಗಳ ಪ್ರದರ್ಶನ ಮತ್ತ ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ರೇಷ್ಮೆ ಕೈಗಾರಿಕಾ ಸಂಸ್ಥೆ ಕಳೆದ ವರ್ಷ ಸುಮಾರು 147 ಕೋಟಿ ರೂ. ವ್ಯಾಪಾರ ವಹಿವಾಟು ನಡೆಸಿ, 27 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು. ಈ ವರ್ಷ ಇದುವರೆಗೂ 135 ಕೋಟಿ ರೂ. ವ್ಯಾಪಾರ ಮಾಡಲಾಗಿದೆ. ಈ ವರ್ಷದಲ್ಲಿ ಲಾಭಾಂಶ ಹೆಚ್ಚಾಗಲಿದ್ದು, 30 ಕೋಟಿ ರೂ. ಲಾಭ ಬರುವ ನಿರೀಕ್ಷೆ ಇದೆ. ದೇಶದಾದ್ಯಂತ ಪ್ರತಿ ವರ್ಷ ಸುಮಾರು ಸಂಸ್ಥೆಯ 75 ಸಾವಿರ ಸೀರೆಗಳು ಮಾರಾಟವಾಗುತ್ತಿವೆ ಎಂದು ಹೇಳಿದರು.

ಯುಗಾದಿ ಹಬ್ಬದ ಕೊಡುಗೆಯಾಗಿ ಕೆಎಸ್‌ಐಸಿ ನವೀನ ರೀತಿಯ ಜಕಾರ್ಡ್ ಸೀರೆಗಳನ್ನು ಬಿಡುಗಡೆ ಮಾಡಿದೆ. ಸೀರೆಯ ಜರಿಯಲ್ಲಿ ಪರಿಶುದ್ಧ ಚಿನ್ನವನ್ನು ಬಳಸಲಾಗಿದೆ ಎಂದು ಹೇಳಿದ ಅವರು, ಕೆಎಸ್‌ಐಸಿಯ ಚನ್ನಪಟ್ಟಣ ಕಾರ್ಖಾನೆಯ ಪುನರುಜ್ಜೀವನಕ್ಕೆ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕ ನೀಲಾ ಮಂಜುನಾಥ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News