ಬಿದಿರು, ಮಣ್ಣು ಬಳಸಿ ಕಟ್ಟಡ ನಿರ್ಮಾಣ
ರಮೇಶ್ ಎಚ್.ಡಿ.
ಪಿರಿಯಾಪಟ್ಟಣ, ಮಾ.14: ಬಿದುರು, ಮಣ್ಣು ಮತ್ತು ಜೆಲ್ಲಿಪುಡಿ ಬಳಸಿಕೊಂಡು ವಿನೂತನ ಪ್ರಯೋಗದೊಂದಿಗೆ ನೂತನ ಅಂಗನವಾಡಿ ಕಟ್ಟಡವನ್ನು ಅತ್ಯಂತ ಗುಣಮಟ್ಟದಲ್ಲಿ ತಾಲೂಕಿನ ಮಳಗನಕೆರೆ ಗಿರಿಜನ ಹಾಡಿಯಲ್ಲಿ ನಿರ್ಮಿಸಲಾಗಿದೆ.
ಕಳೆದ 2 ವರ್ಷಗಳ ಹಿಂದೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಗಿರಿಜನ ಉಪಯೋಜನಾಡಿಯಲ್ಲಿ ಕ್ರೂಢೀಕರಿಸಿದ ಅನುದಾನದೊಂದಿಗೆ ಈ ಕಾಮಗಾರಿ ನಡೆಸಲಾಗಿದ್ದು, ಅಂದಾಜು ವೆಚ್ಚ 8.26ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಮೈಸೂರಿನ ಎನ್‌ಐಇಬಿಇ ಕಾಲೇಜಿನ ತಾಂತ್ರಿಕ ಸಹಾಯದೊಂದಿಗೆ ಈ ಕಟ್ಟಡದ ಕಾಮಗಾರಿ ನಡೆದಿದ್ದು, 20ವರ್ಷಗಳ ಕಾಲ ಇದರ ಉಪಯೋಗ ಪಡೆಯಬಹುದಾಗಿದೆ. ಆದ್ದರಿಂದ ಉತ್ತಮ ನಿರ್ವಹಣೆಯೊಂದಿಗೆ ಬಳಸಿಕೊಳ್ಳಬೇಕೆಂದು ಕಟ್ಟಡದ ಕಾರ್ಮಿಕ ಜೋಸೆಫ್ ಸಲಹೆ ನೀಡಿದ್ದಾರೆ.
ಕಟ್ಟಡ ನಿರ್ಮಾಣದ ವಿವರ: ಸಂಪೂರ್ಣ ಅಂಗನವಾಡಿ ಕಟ್ಟಡವನ್ನು ಸುಮಾರು 64 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಸ್ಥಳೀಯವಾಗಿ ದೊರೆಯುವ ಬಿದಿರನ್ನೇ ಉಪಯೋಗಿಸಲಾಗಿದೆ. ಕುಟ್ಟೆ ಮತ್ತಿತರೆ ಮರಗಳಿಗೆ ಕಾಡುವ ಕೀಟ, ರೋಗಗಳಿಂದ ರಕ್ಷಿಸುವ ಸಲುವಾಗಿ ಬಿದಿರನ್ನು ಬೊರೆಕ್ಸ್‌ನಿಂದ ಚಿಕಿತ್ಸೆಗೊಳಪಡಿಸಲಾಗಿದೆ.
ಗೋಡೆಗಳನ್ನು ಕಟ್ಟುವಾಗ ಬಿದಿರಿನ ಜಾಲರಿ ನಿರ್ಮಿಸಿ ಅದಕ್ಕೆ ಹದ ಮಾಡಿದ ಮಣ್ಣಿನಿಂದ ನಿರ್ಮಿಸಲಾಗಿದ್ದು, ಈ ಯೋಜನೆಯ ಮುಖ್ಯ ಕಾರಣವೆಂದರೆ ಸ್ಥಳೀಯವಾಗಿ ದೊರೆಯುವ ವಸ್ತುಗಳು, ಜ್ಞಾನ ಹಾಗೂ ಕೌಶಲ್ಯವನ್ನು ಉಪಯೋಗಿಸಿ ಸ್ಥಳೀಯ ಗಿರಿಜನ ಸಮುದಾಯವನ್ನು ಸಶಕ್ತಗೊಳಿಸುವುದಾಗಿದೆ.
ಈ ಅಂಗನವಾಡಿ ಕೇಂದ್ರವನ್ನು ಗಿರಿಜನರು ಸದುಪಯೋಗಿಸಿಕೊಳ್ಳುವ ಸಲುವಾಗಿ ನಿರ್ಮಿತಿ ಕೇಂದ್ರವು ಸರಳ, ನಿರ್ವಹಣೆರಹಿತ ಸೋಲಾರ್ ಉಪಕರಣಗಳನ್ನು ಹಾಗೂ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿದ್ದು, ಇದು ವಿದ್ಯುತ್ ಹಾಗೂ ನೀರಿನ ಕೊರತೆಯನ್ನು ನೀಗಿಸುತ್ತದೆ. ಜೊತೆಗೆ ಬಿದಿರನ್ನೇ ಉಪಯೋಗಿಸಿ ಕೇಂದ್ರದ ಸುತ್ತಲೂ ಬೇಲಿಯನ್ನು ನಿರ್ಮಿಸಿದ್ದು, ಅದಕ್ಕೆ ಸ್ಥಳೀಯ ಬೇಲಿಗಿಡಗಳಾದ ಜತ್ರೋಪ ಹಾಗೂ ಗ್ರೀಸ್ ಕಡ್ಡಿಗಳನ್ನು ಉಪಯೋಗಿಸಿ ಹಸಿರು ಬೇಲಿಯನ್ನು ಹಾಕಲಾಗಿದೆ. ಕೇಂದ್ರದ ಹಿಂಭಾಗದಲ್ಲಿ ಅಂಗನವಾಡಿ ಮಕ್ಕಳ ಊಟಕ್ಕಾಗಿ ತಾಜಾ ತರಕಾರಿಗಳನ್ನು ಬೆಳೆಯುವ ಸಲುವಾಗಿ ಅಡುಗೆಮನೆ ಕೈತೋಟವನ್ನು ನಿರ್ಮಿಸಲಾಗಿದೆ. ಮಕ್ಕಳ ಕಲೆಗಳನ್ನು ಉತ್ತೇಜಿಸುವ ಸಲುವಾಗಿ ವರ್ತುಲ ಕ್ರೀಡಾಂಗಣ ನಿರ್ಮಿಸಲಾಗಿದೆ. ಹಾಗೂ ಸ್ಥಳೀಯ ಸಮುದಾಯದ ಪರಸ್ಪರ ಅಭಿಪ್ರಾಯ ವಿನಿಮಯಕ್ಕಾಗಿ ಜಾಗವನ್ನು ಮೀಸಲಿರಿಸಲಾಗಿದೆ.