ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಮಾ.15: ಆರೆಸ್ಸೆಸ್ ಕಾರ್ಯಕರ್ತ ರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದು, ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಬಿಜೆಪಿ ಶಾಸಕರ ನಿಯೋಗ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳ ಬಂಧನಕ್ಕಾಗಿ ಸಿಸಿಬಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ ಎಂದರು.
ಮೃತ ರಾಜು ಕುಟುಂಬಕ್ಕೆ ಸಾಂತ್ವನ ಹೇಳಲು ಮೈಸೂರಿಗೆ ತೆರಳುತ್ತಿದ್ದು, ನನ್ನೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಬರಲಿದ್ದಾರೆ. ಅಲ್ಲದೆ, ರಾಜು ಕುಟುಂಬಕ್ಕೆ ಸರಕಾರದ ವತಿಯಿಂದ 5 ಲಕ್ಷ ರೂ.ಪರಿಹಾರ ಧನವನ್ನು ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಘಟನೆ ನಡೆದ ಸ್ಥಳದಲ್ಲಿ ಲಭ್ಯವಾಗಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹತ್ಯೆಯ ಹಿಂದೆ ಯಾವುದೇ ವ್ಯಕ್ತಿ, ಸಂಘಟನೆಯಿರಲಿ ಮೃದುಧೋರಣೆ ತಾಳುವುದಿಲ್ಲ. ಹಂತಕರನ್ನು ಪತ್ತೆ ಹಚ್ಚುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.
ಹತ್ಯೆಯ ಹಿಂದಿನ ಉದ್ದೇಶ ಸದ್ಯಕ್ಕೆ ತಿಳಿದು ಬಂದಿಲ್ಲ. ಕೇವಲ ಊಹಾಪೋಹಗಳ ಆಧಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಹತ್ಯೆ ಮಾಡಿದವರನ್ನು ಬಂಧಿಸಿ, ಅವರು ನೀಡುವ ಮಾಹಿತಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ರಾಜು ಹತ್ಯೆ ಖಂಡಿಸಿ ಮೈಸೂರು ಬಂದ್ ಆಚರಣೆ ಸಂದರ್ಭದಲ್ಲಿ ಆಟೊ, ದ್ವಿಚಕ್ರ ವಾಹನ, ಪೊಲೀಸ್ ಜೀಪ್, ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು ಎಂದು ಅವರು ತಿಳಿಸಿದರು.
ಪಿಎಫ್‌ಐ ಕಾರ್ಯಕರ್ತರ ಪ್ರಕರಣ ವಾಪಸ್: ಪಾಪ್ಯುಲರ್ ್ರಂಟ್ ಆ್ ಇಂಡಿಯಾ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸಚಿವ ಸಂಪುಟ ಉಪ ಸಮಿತಿ ಮಾಡಿದ್ದ ಶಿಾರಸಿನಂತೆ ಸರಕಾರ ವಾಪಸ್ ಪಡೆದಿತ್ತು. ಆ ಸಂದರ್ಭದಲ್ಲಿ ನಾನು ಗೃಹ ಸಚಿವನಾಗಿರಲಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಹಿಂದಿನ ಗೃಹ ಸಚಿವ(ಕೆ.ಜೆ.ಜಾರ್ಜ್) ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟ ಉಪ ಸಮಿತಿ ಮಾಡಿದ್ದ ಶಿಫಾರಸ್ಸಿನಂತೆ ಸರಕಾರ ಪ್ರಕರಣಗಳನ್ನು ಹಿಂಪಡೆಯುವ ತೀರ್ಮಾನ ಮಾಡಿತ್ತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.