‘ಮನುವಾದ-ಜಾತಿವಾದ ಜನಸಾಮಾನ್ಯರ ಶತ್ರುಗಳು’
ಬೆಂಗಳೂರು, ಮಾ.15: ದೇಶವಿರೋಧಿ ಘೋಷಣೆಗಳನ್ನು ಕೂಗಿದರೆಂಬ ಆರೋಪದಲ್ಲಿ ಬಂಧಿತರಾಗಿರುವ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಅನಿರ್ಬಣ್ ಭಟ್ಟಾಚಾರ್ಯ ಹಾಗೂ ಗಿಲಾನಿಯವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವಿವಿಧ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ನಗರದ ಪುರಭವನದಿಂದ ಕಬ್ಬನ್ ಉದ್ಯಾನದವರೆಗೂ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದ್ದವು.
ಪ್ರತಿಭಟನಾ ವಿದ್ಯಾರ್ಥಿಗಳು ರ್ಯಾಲಿಯುದ್ದಕ್ಕೂ ಕೋಮುವಾದದಿಂದ ಸ್ವಾತಂತ್ರ, ಸಂಘಪರಿವಾರದಿಂದ ಸ್ವಾತಂತ್ರ, ಜಾತಿವಾದದಿಂದ ಸ್ವಾತಂತ್ರ, ಬ್ರಾಹ್ಮಣವಾದದಿಂದ ಸ್ವಾತಂತ್ರ, ಪೊಲೀಸರ ದೌರ್ಜನ್ಯದಿಂದ ಸ್ವಾತಂತ್ರ ಸೇರಿದಂತೆ ಅನೇಕ ಸಮಸ್ಯೆಗಳಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರಬೇಕೆಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಗಳ ಹುರುಪು: ಜೆಎನ್‌ಯು ವಿದ್ಯಾರ್ಥಿಗಳನ್ನು ಬೆಂಬಲಿಸಿ, ನಗರದ ವಿವಿಧ ಖಾಸಗಿ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಜಾತಿವಾದ ಹಾಗೂ ಕೋಮುವಾದದಿಂದ ನಮಗೆ ಸಂಪೂರ್ಣ ಸ್ವಾತಂತ್ರಬೇಕು. ಜೆಎನ್‌ಯು ವಿದ್ಯಾರ್ಥಿಗಳ ಹೋರಾಟ ನ್ಯಾಯಯುತವಾಗಿದೆ. ಅವರ ಹೋರಾಟದೊಂದಿಗೆ ನಾವು ಸದಾ ಇರುತ್ತೇವೆಂದು ತಮ್ಮ ಬೆಂಬಲವನ್ನು ಘೋಷಣೆಗಳನ್ನು ಕೂಗುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಕೋಮುವಾದಿ ಬಿಜೆಪಿ ಸರಕಾರ ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದೆ. ದೆಹಲಿ ಪೊಲೀಸರು ವಿದ್ಯಾರ್ಥಿಗಳು ಭಯೋತ್ಪಾದಕರು ಎಂಬ ರೀತಿಯಲ್ಲಿ ಅವರ ಮೇಲೆ ಯುದ್ಧವನ್ನೆ ಸಾರಿದ್ದಾರೆ. ಇವೆಲ್ಲವೂ ನಿಲ್ಲಬೇಕಾದರೆ ನಾವು ಕೋಮುವಾದಿ ಶಕ್ತಿಗಳಿಂದ ಸ್ವಾತಂತ್ರ ಪಡೆಯುವುದಕ್ಕಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ದೇಶದ ಎಲ್ಲ ವಿಶ್ವವಿದ್ಯಾಲನಿಯದ ವಿದ್ಯಾರ್ಥಿಗಳು ಜೆಎನ್‌ಯು ವಿದ್ಯಾರ್ಥಿಗಳ ನ್ಯಾಯಯುತವಾದ ಹೋರಾಟವನ್ನು ಬೆಂಬಲಿಸಬೇಕು. ದೇಶದಲ್ಲಿ ಜಾತಿವಾದ, ಮನುವಾದ ಹಾಗೂ ಬಂಡವಾಳಶಾಹಿಗಳು ಜನಸಾಮಾನ್ಯರ ಶತ್ರುಗಳಾಗಿದ್ದು, ಅವರ ವಿರುದ್ಧ ಹೋರಾಟ ಮಾಡುತ್ತಿರುವ ಜೆಎನ್‌ಯು ಹೋರಾಟಕ್ಕೆ ನಾವೆಲ್ಲರೂ ಶಕ್ತಿ ತುಂಬೋಣ ಎಂದು ಅವರು ಕರೆ ನೀಡಿದರು.
ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಹರಿರಾಮ್ ಮಾತನಾಡಿ, ಜಾತಿ ಹಾಗೂ ಮನುವಾದದ ಕೇಂದ್ರಗಳಾಗಿರುವ ವಿಶ್ವವಿದ್ಯಾನಿಲಯಗಳಲ್ಲಿ ಸಮಾನತೆ ಬೀಜ ಬಿತ್ತಬೇಕಾಗಿದೆ. ಅದಕ್ಕಾಗಿ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಬೇರು ಬಿಟ್ಟಿರುವ ಎಬಿವಿಪಿ ಸಂಘಟನೆಯನ್ನು ಬೇರು ಸಹಿತ ಕಿತ್ತು ಹಾಕಬೇಕು. ಆಗ ಮಾತ್ರ ವಿಶ್ವವಿದ್ಯಾನಿಲಯಗಳಲ್ಲಿ ಸರಿಯಾದ ಜ್ಞಾನ ಸಿಗಲು ಸಾಧ್ಯ ಎಂದು ತಿಳಿಸಿದರು.
ಎಐಎಸ್‌ಎ ಸಂಘಟನೆಯ ರಾಜ್ಯಾಧ್ಯಕ್ಷ ಮಾರುತಿ ಮಾತನಾಡಿ, ದೇಶದಿಂದ ಕೋಮುವಾದ ಹಾಗೂ ಮನುವಾದ ತೊಲಗಬೇಕಾದರೆ ಹೋರಾಟವೊಂದೇ ಮಾರ್ಗವಾಗಿದೆ. ಜೆಎನ್‌ಯು ವಿದ್ಯಾರ್ಥಿಗಳು ಪ್ರಾರಂಭಿಸಿರುವ ಹೋರಾಟವು ದೇಶಕ್ಕೆ ಕಾಡುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಬಲ್ಲದು. ಹೀಗಾಗಿ ಇವರ ಹೋರಾಟಕ್ಕೆ ವಿದ್ಯಾರ್ಥಿಗಳಲ್ಲದೆ ಜನಪರ ಆಶಯವುಳ್ಳ ಪ್ರತಿಯೊಬ್ಬರೂ ಸ್ಪಂದಿಸಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಎಸ್‌ಎಫ್‌ಐ, ಎಐಎಸ್‌ಎಫ್, ಎಸ್‌ಐಒ ಕೆವಿಎಸ್ ವಿದ್ಯಾರ್ಥಿ ಸಂಘಟನೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.