ತಿಂಗಳ ಅಂತ್ಯಕ್ಕೆ ಸಂಚಾರ ಮುಕ್ತ: ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು,ಮಾ. 15: ನಮ್ಮ ಮೆಟ್ರೊ ಮೊದಲ ಹಂತದ ಪೂರ್ವಪಶ್ಚಿಮ ಕಾರಿಡಾರ್ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಈ ತಿಂಗಳ ಅಂತ್ಯ ಇಲ್ಲವೇ ಮುಂದಿನ ತಿಂಗಳ ಮಧ್ಯ ಭಾಗದ ವೇಳೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಮಂಗಳವಾರ ನಗರದ ಮಿನ್ಕ್ಸ್ ವೃತ್ತದಿಂದ ವಿಧಾನಸೌಧ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಮೆಟ್ರೊ ನಿಲ್ದಾಣಗಳನ್ನು ಮೆಟ್ರೊ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗಿನ ಕಾರಿಡಾರ್‌ನಲ್ಲಿ ಮಿನ್ಕ್ಸ್ ವೃತ್ತದಿಂದ ಮಾಗಡಿ ರಸ್ತೆವರೆಗಿನ ನಿಲ್ದಾಣದ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಈ ನಡುವೆ ಸಂಚಾರಕ್ಕೆ ಅನುಮತಿ ಕೋರಿ ರೈಲ್ವೆ ಸುರಕ್ಷತಾ ಮಂಡಳಿಗೆ ವಾರದಲ್ಲಿ ಪತ್ರ ಬರೆಯಲು ನಮ್ಮ ಮೆಟ್ರೊ ನಿರ್ಧರಿಸಿದೆ. ಅಧಿಕೃತವಾಗಿ ಸುರಕ್ಷಾ ಪ್ರಮಾಣ ಪತ್ರ ಬಂದ ಕೆಲವೇ ದಿನಗಳಲ್ಲಿ ಪೂರ್ವಪಶ್ಚಿಮ ಕಾರಿಡಾರ್‌ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ನಾಗಸಂದ್ರದಿಂದ ಪುಟ್ಟೇನಹಳ್ಳಿವರೆಗಿನ ಉತ್ತರ ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆ ನಿಲ್ದಾಣದಿಂದ ಮೆಜೆಸ್ಟಿಕ್ ನಿಲ್ದಾಣದವರೆಗೆ ಕಾಮಗಾರಿ ನಡೆಯುತ್ತಿದ್ದು, ಸುರಂಗ ಕೊರೆಯುವ ಯಂತ್ರಗಳು ಕೆಲಸ ಮುಗಿಸಿ 23 ತಿಂಗಳಲ್ಲಿ ವಾಪಸ್ ಆಗಲಿವೆ. ಆದಾದ ಬಳಿಕ ಜೂನ್ ಅಂತ್ಯದ ವೇಳೆಗೆ ಉತ್ತರ ದಕ್ಷಿಣ ಕಾರಿಡಾರ್ ಕೂಡಾ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.
ಮೆಟ್ರೋ ಕಾಮಗಾರಿ ನಿಗದಿತ ಸಮಯಕ್ಕಿಂತ ತುಸು ವಿಳಂಬವಾಯಿತು. ಅದಕ್ಕೆ ಸುರಂಗ ಕೊರೆಯುವಾಗ ಕೆಲವೆಡೆ ಗಟ್ಟಿಯಾದ ಕಲ್ಲುಗಳು ಸಿಕ್ಕರೆ ಕೆಲವೆಡೆ ಮೆದುವಾದ ಮಣ್ಣು ಸಿಕ್ಕಿ ಕಾಮಗಾರಿಗೆ ಅಡತಡೆಯಾಯಿತು. ಅದನ್ನು ಹೊರತುಪಡಿಸಿ ಕಾಮಗಾರಿ ಭರದಿಂದ ಸಾಗುತ್ತಿದೆ. ಮೆಟ್ರೊಗೆ ಸರಕಾರ ಸಂಪೂರ್ಣ ಹಣಕಾಸಿನ ನೆರವು ಒದಗಿಸಿದೆ ಎಂದರು.
13,600 ಕೋಟಿ ರೂ. ವೆಚ್ಚದ ಮೊದಲ ಹಂತದ ಮೆಟ್ರೋ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಅಂಡರ್‌ಗ್ರೌಂಡ್ ರೈಲ್ವೆ ನಿಲ್ದಾಣಗಳ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಅವುಗಳನ್ನು 810 ದಿನಗಳೊಳಗಾಗಿ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮೆಟ್ರೊ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಮಂಡಲಿ ಅನುಮತಿ ನೀಡಬೇಕಾದರೆ ಮೊದಲು ಕಾಮಗಾರಿಗಳು ಸಂಪೂರ್ಣವಾಗಿ ಮುಗಿಯಬೇಕು. ಆ ಕೆಲಸ ಈಗ ಮುಗಿದಿದ್ದು, ರೈಲ್ವೆ ಸುರಕ್ಷತಾ ಪ್ರಮಾಣ ಪತ್ರಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.