ಆಂಟಿ ಬಯೋಟಿಕ್ ಉತ್ಪನ್ನಗಳ ಬಳಕೆ ವಿರುದ್ಧ ಜಾಗೃತಿ ಆವಶ್ಯಕ: ನ್ಯಾ.ಇಂದ್ರಕಲಾ
ಬೆಂಗಳೂರು, ಮಾ. 15: ಆರೋಗ್ಯಕ್ಕೆ ಮಾರಕವಾಗಿರುವ ಆಂಟಿಬಯೋಟಿಕ್ ರಾಸಾಯನಿಕಗಳನ್ನು ಬಳಸಿ ಉತ್ಪಾದಿಸುವ ಆಹಾರ ಉತ್ಪನ್ನಗಳನ್ನು ಬಳಸದಂತೆ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಜಾಗೃತಿ ಆಂದೋಲನವನ್ನು ಸರಕಾರ ಆಯೋಜಿಸಬೇಕು ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ನ್ಯಾ.ಬಿ.ಎಸ್. ಇಂದ್ರಕಲಾ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೋಗಗಳ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದ್ದ ಆಂಟಿಬಯೋಟಿಕ್ ರಾಸಾಯನಿಕವನ್ನು ಲಾಭದ ದೃಷ್ಟಿಯಿಂದ ಕೃಷಿ, ಹೈನುಗಾರಿಕೆ ಸೇರಿದಂತೆ ಇತರೆ ಆಹಾರೋತ್ಪನ್ನ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಈ ಪರಿಣಾಮ ಆಂಟಿಬಯೋಟಿಕ್ ಉತ್ಪನ್ನಗಳನ್ನು ಬಳಸುವ ಗ್ರಾಹಕರು ಇಂದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಈ ಉತ್ಪನ್ನಗಳ ಸೇವನೆಯಿಂದ ಮಾನವನ ಜೀವಿತಾವಧಿ ಗಣನೀಯವಾಗಿ ಕ್ಷೀಣಿಸುತ್ತಿದೆ ಎಂದು ಆತಂಕಪಟ್ಟರು.
ಈ ನಿಟ್ಟಿನಲ್ಲಿ ಸರಕಾರ ಆಂಟಿಬಯೋಟಿಕ್ ಉತ್ಪನ್ನಗಳನ್ನು ಬಳಸದಂತೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚಿನದಾಗಿ ಗ್ರಾಮೀಣ ಪ್ರದೇಶದಲ್ಲಿ ಈ ಉತ್ಪನ್ನಗಳಿಂದಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು. ಗ್ರಾಹಕರ ದಿನಾಚರಣೆ ಅಂಗವಾಗಿ ಆಯೋಜಿಸಿರುವ ‘ಆಂಟಿಬಯೋಟಿಕ್ ಆಹಾರವಾಗದಿರಲಿ’ ಎಂಬ ಜಾಗೃತಿ ಕಾರ್ಯಕ್ರಮವನ್ನು ವರ್ಷಪೂರ್ತಿ ಆಯೋಜಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಹಕರ ಕಾನೂನು ತಜ್ಞ ಡಾ. ಆಶೋಕ್ ಆರ್. ಪಾಟೀಲ್ ಮಾತನಾಡಿ, ಗ್ರಾಹಕರನ್ನು ವಂಚಿಸುವ ಮತ್ತು ಗ್ರಾಹಕರನ್ನು ದಿಕ್ಕು ಬದಲಿಸುವ ಜಾಹೀರಾತುಗಳ ಕಡಿವಾಣಕ್ಕಾಗಿ ಸೆಂಟ್ರಲ್ ರೆಗ್ಯುಲೇಟರ್ ಅಥಾರಿಟಿ ಎಂಬ ಗ್ರಾಹಕರ ವೇದಿಕೆಯನ್ನು ರಚಿಸಲು ಸರಕಾರ ಚಿಂತಿಸಿದೆ. ಈ ವೇದಿಕೆ ಗ್ರಾಹಕರನ್ನು ಮೋಸ ಮಾಡುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ಗ್ರಾಹಕರಿಗೆ ಸಂಬಂಧಿಸಿದ ವ್ಯಾಜ್ಯಗಳ ವಿಲೇವಾರಿಯಲ್ಲಿ ರಾಜ್ಯ 5ನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ ಗ್ರಾಹಕರ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಸರಕಾರೇತರ ಸಂಸ್ಥೆಗಳಿಗೆ ಸರಕಾರ ಪ್ರೋತ್ಸಾಹಿಸಬೇಕು. ಮತ್ತು ಗ್ರಾಹಕರ ರಕ್ಷಣೆಗಾಗಿ ಸ್ವತಂತ್ರ ಇಲಾಖೆಯೊಂದನ್ನು ರಚಿಸುವ ಆವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್, ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಸಿಂಧೂರಿ ದಾಸರಿ, ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಜಿ. ಕಲ್ಪನಾ ಉಪಸ್ಥಿತರಿದ್ದರು.