×
Ad

ಮಾ.18ರಂದು ಅಂತಿಮ ನಿರ್ಧಾರ: ಡಾ.ಜಿ.ಪರಮೇಶ್ವರ್

Update: 2016-03-16 23:05 IST

ಬೆಂಗಳೂರು, ಮಾ.16: ಅತಂತ್ರ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಮಾ.18ರಂದು ನಡೆಯುವ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಂತ್ರ ಫಲಿತಾಂಶ ಬಂದಿರುವ ಪಂಚಾಯತ್‌ಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖಾ ವರದಿ ರಾಜ್ಯ ಸರಕಾರದ ಕೈ ಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಗಮನ ಹರಿಸುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಡಿ.ಕೆ.ರವಿ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಅವರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮಂಗಳವಾರ ತುಮಕೂರು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ತಾಯಿ ಹಾಗೂ ಸಹೋದರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ ದಳ: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಸರಕಾರ ರಚನೆ ಮಾಡಿದೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಯಾವ ಆಲೋಚನೆಯೂ ನಮಗಿಲ್ಲ. ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪರಮೇಶ್ವರ್ ಹೇಳಿದರು.
ವಸತಿ ರಹಿತ ಪೊಲೀಸರಿಗೆ ಮನೆ ಕಟ್ಟಿಕೊಡುವ ‘ಪೊಲೀಸ್ ಗೃಹ’ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಇದಕ್ಕೆ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News