ಅಲೆಮಾರಿಗಳ ಸರ್ವತೋಮುಖ ಅಭಿವೃದ್ಧಿಗೆ ಅನುದಾನ ನೀಡಿ: ಡಾ.ದ್ವಾರಕಾನಾಥ್
ಬೆಂಗಳೂರು, ಮಾ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಮುನ್ನ ಅಲೆಮಾರಿ ಸಮುದಾಯಗಳ ಮುಖಂಡರ ಜೊತೆ ಸಭೆ ನಡೆಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಒತ್ತಾಯಿಸಿದ್ದಾರೆ.
ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ದಕ್ಕಲಿಗ, ಸಿಂದೊಳ್ಳು ಮತ್ತು ಗಂಟಿಬೋರ್ ಸಮುದಾಯ’ಗಳ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಲೆಮಾರಿ ಸಮುದಾಯ ರಸ್ತೆಯ ಬದಿಗಳಲ್ಲಿ ಗುಡಾರಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದೆ. ಆ ಸಮುದಾಯದ ಮಕ್ಕಳು ಶಾಲೆಯ ಮುಖವನ್ನು ನೋಡದೆ, ತಂದೆ-ತಾಯಿಗಳ ಜೊತೆ ಭಿಕ್ಷೆ ಬೇಡುವ ವೃತ್ತಿಯಲ್ಲಿ ತೊಡಗಿದ್ದಾರೆ. ಇಂತಹ ಅಲೆಮಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರಕಾರ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ 2013-14ರಲ್ಲಿ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ, ಒಂದು ವರ್ಷ ಕಳೆದರೂ ಈ ಅನುದಾನದಲ್ಲಿ ಒಂದು ರೂ.ಗಳನ್ನು ಖರ್ಚು ಮಾಡಿಲ್ಲ. ಹೀಗಾಗಿ ಸರಕಾರ ಅನುದಾನ ಬಿಡುಗಡೆ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದಾಗಿ ಅಲೆಮಾರಿಗಳು ಇಂದಿಗೂ ಬೀದಿಯಲ್ಲಿ ಉಳಿಯುವಂತಾಗಿದೆ ಎಂದು ಸಿ.ಎಸ್.ದ್ವಾರಕಾನಾಥ್ ಆರೋಪಿಸಿದರು.
ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಅಲೆಮಾರಿಗಳನ್ನು ಕೇವಲ ಭಿಕ್ಷುಕರೆಂದು ಮಾತ್ರ ನೋಡಲಾಗುತ್ತಿದೆ. ಆದರೆ, ಅವರಲ್ಲಿರುವ ಔಷಧಿ ಸಸ್ಯಗಳ ಮಾಹಿತಿ, ಪರಿಸರಕ್ಕೆ ಎಂದಿಗೂ ತೊಂದರೆ ಕೊಡದ ನಿಸ್ವಾರ್ಥತೆ ಹಾಗೂ ಅವರ ಜೀವನ ಅನುಭವವನ್ನು ಪಡೆಯುವುದಕ್ಕೆ ಶಿಷ್ಟ ಸಮುದಾಯಕ್ಕೆ ಎಂದಿಗೂ ಸಾಧ್ಯವಿಲ್ಲ. ಇಂತಹ ಸಮಾಜಪರ, ಜೀವಪರವಾದ ಅಲೆಮಾರಿ ಸಮುದಾಯಗಳನ್ನು ಸರಕಾರ ಸೇರಿದಂತೆ ನಾಗರಿಕ ಸಮಾಜ ನಿರ್ಲಕ್ಷ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ಅಲೆಮಾರಿ ಸಮುದಾಯಗಳ ಕೊಡುಗೆ ಅಪಾರ. ಅಲೆಮಾರಿ ಸಮುದಾಯದ ದರೋಜಿ ಈರಮ್ಮ ಅವರಿಂದ 5 ಮಹಾಕಾವ್ಯಗಳನ್ನು ರಚಿಸಲಾಗಿದೆ. ಹೀಗೆ ಅಲೆಮಾರಿ ಸಮುದಾಯದಲ್ಲಿ ಸಾವಿರಾರು ದರೋಜಿ ಈರಮ್ಮನಂಥವರು ಇದ್ದಾರೆ. ಆದರೆ, ಅವರನ್ನು ಗುರುತಿಸುವಂತಹ ಕೆಲಸ ನಮ್ಮ ವಿಶ್ವವಿದ್ಯಾನಿಲಯಗಳಿಂದ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಾಲಗುರುಮೂರ್ತಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು 66 ವರ್ಷಗಳು ಕಳೆದಿದ್ದರೂ ಸುಮಾರು 15 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಅಲೆಮಾರಿ ಸಮುದಾಯದವರು ಮನೆಯಿಲ್ಲದೆ ಬೀದಿಯಲ್ಲಿ ಮಲಗುತ್ತಿದ್ದಾರೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಅಲೆಮಾರಿ ಸಮುದಾಯಗಳ ಸ್ಥಿತಿಗತಿಗಳನ್ನು ಸರಕಾರಕ್ಕೆ ಮುಟ್ಟಿಸುವ ಸಲುವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿರುವ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಗಮನ ಕೊಡಬೇಕು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಿಂದುಳಿದ ವರ್ಗಗಳ ಪಾಲಿಗೆ ಆಶಾಕಿರಣವಾಗಿದ್ದರು. ಅದೇ ಮಾದರಿಯಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲೆಮಾರಿ ಸಮುದಾಯಗಳ ಬದುಕಿಗೆ ಬೆಳಕಾಗುವಂತಹ ಕೆಲಸ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಪ್ರೊ.ಆರ್.ಅನುರಾಧಾ ಪಟೇಲ್, ಬರಹಗಾರ ಹಾಗೂ ಅಲೆಮಾರಿ ಸಮುದಾಯದ ಮುಖಂಡ ಲಕ್ಷ್ಮಣ್ ಗಾಯಕ್‌ವಾಡ್, ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಒ.ಅನಂತರಾಮಯ್ಯ ಮತ್ತಿತರರಿದ್ದರು.
ಅಲೆಮಾರಿಗಳೇ ನಿಜವಾದ ಭಾರತಿಯರು
ಭಾರತೀಯತೆ ಎಂಬ ಪದವು ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವ ಈ ಸಂದರ್ಭದಲ್ಲಿ ನಿಜವಾದ ಭಾರತೀಯರು ಎಂದರೆ ಅದು ಅಲೆಮಾರಿ ಸಮುದಾಯಗಳೆ ಆಗಿವೆ. ಈ ಸಮುದಾಯಗಳ ಜನತೆ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಇಡೀ ಭಾರತವನ್ನೆ ನಮ್ಮ ಊರು ಎಂದು ಪರಿಗಣಿಸುತ್ತಾರೆ. ಇವರು ದೇಶದಲ್ಲಿರುವ ಎಲ್ಲ ಭಾಷೆ, ಜಾತಿ, ಧರ್ಮ ಹಾಗೂ ಸಂಸ್ಕೃತಿಯನ್ನು ಗೌರವಿಸುವವರಾಗಿದ್ದಾರೆ. ಹೀಗಾಗಿ ಅಲೆಮಾರಿ ಸಮುದಾಯಗಳೆ ನಿಜವಾದ ಭಾರತೀಯರು.
-ಪ್ರೊ.ಹಿ.ಚಿ.ಬೋರಲಿಂಗಯ್ಯ ವಿಶ್ರಾಂತ ಕುಲಪತಿ, ಹಂಪಿ ವಿಶ್ವವಿದ್ಯಾಲಯ