×
Ad

ದೇಶಕ್ಕೆ ಸ್ವಾತಂತ್ರ ಸಿಕ್ಕಿತು, ಅಲೆಮಾರಿಗಳಿಗೆ ಸಿಗಲಿಲ್ಲ್ಲ: ಲಕ್ಷ್ಮಣ್ ಗಾಯಕ್‌ವಾಡ್

Update: 2016-03-16 23:07 IST

ಬೆಂಗಳೂರು, ಮಾ.16: ಅಲೆಮಾರಿಗಳಾದ ಗಂಟಿಚೋರ್ ಸಮುದಾಯ ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ, ಸಮುದಾಯದ ಅನೇಕ ಮಂದಿ ಪ್ರಾಣ ಕಳೆದುಕೊಂಡರು. ಇದರ ಪ್ರಯುಕ್ತ 1947ರಲ್ಲಿ ದೇಶಕ್ಕೆ ಸ್ವಾತಂತ್ರ ಸಿಕ್ಕಿತು. ಆದರೆ, ಅಲೆಮಾರಿ ಸಮುದಾಯಗಳಿಗೆ ಇಂದಿಗೂ ಸ್ವಾತಂತ್ರ ಸಿಕ್ಕಿಲ್ಲ ಎಂದು ಉಚಲ್ಯಾ ಕೃತಿಯ ಬರಹಗಾರ ಲಕ್ಷ್ಮಣ್ ಗಾಯಕ್‌ವಾಡ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ದಕ್ಕಲಿಗ, ಸಿಂದೋಳ್ಳು ಮತ್ತು ಗಂಟಿಚೋರ್ ಸಮುದಾಯಗಳ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲೆಮಾರಿ ಗಂಟಿಚೋರ್ ಸಮುದಾಯವು ಬ್ರಿಟಿಷರ ವಿರುದ್ಧ ಗೆರಿಲ್ಲಾ ಮಾದರಿಯ ಯುದ್ಧವನ್ನು ಮಾಡಿ, ಅವರಲ್ಲಿದ್ದ ಹಣವನ್ನು ದೋಚಿ ದೇಶದ ಬಡ ಜನತೆಗೆ ಹಂಚುತ್ತಿದ್ದರು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕನ್ನು ನೀಡಿದ್ದಾರೆ. ಆದರೆ, ದೇಶವನ್ನು ಇಲ್ಲಿಯವರೆಗೂ ಆಳ್ವಿಕೆ ಮಾಡಿರುವ ಮನುವಾದಿ ಸರಕಾರಗಳು ನಮಗೆ ಸಲ್ಲಬೇಕಾದ ಹಕ್ಕು ಹಾಗೂ ಅವಕಾಶವನ್ನು ಕೊಡದೆ ವಂಚಿಸಿವೆ. ಹೀಗಾಗಿ ನಾವು ದೇಶದಲ್ಲಿ ಎಲ್ಲೆಲ್ಲಿ ಖಾಲಿ ಜಾಗಗಳಿವೆಯೋ ಅಲ್ಲೆಲ್ಲಾ ಮನೆ ಹಾಗೂ ಕೃಷಿಯನ್ನು ಮಾಡಲು ಪ್ರಾರಂಭಿಸಬೇಕು ಎಂದು ಕರೆ ನೀಡಿದರು.

ಅಲೆಮಾರಿ ಸಮುದಾಯದ ಮಕ್ಕಳ ಚಿಂತನೆ ಸೃಜನಾತ್ಮಕವಾಗಿರುತ್ತದೆ. ಅವರಿಗೆ ಸೂಕ್ತ ಅವಕಾಶ ಒದಗಿ ಬಂದರೆ ಹಲವು ಸಾಧನೆಗಳನ್ನು ಮಾಡಿ, ದೇಶವನ್ನು ಅಭಿವೃದ್ಧಿಗೊಳಿಸುವಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ನಮ್ಮ ಹಕ್ಕಗಳನ್ನು ಪಡೆಯುವುದಕ್ಕಾಗಿ ಹಾಗೂ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸರಕಾರದೊಂದಿಗೆ ನಿರಂತರವಾದ ಸಂಘರ್ಷ ನಡೆಸಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News