ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ ಸಲ್ಲದು: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು, ಮಾ. 16: ಕೆಲ ಗ್ರಾಮಗಳಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು ಪೂರ್ವ ಯೋಜಿತವಾಗಿ ಕ್ರಿಯಾಯೋಜನೆ ರೂಪಿಸದೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ನಿರ್ಲಕ್ಷ ತೋರಿರುವ ಬಗ್ಗೆ ಕೃಷಿ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲೂ ಜಿಲ್ಲಾ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 24 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನದಲ್ಲಿ ಖರ್ಚಾಗದೆ 4 ಕೋಟಿ ರೂ. ಉಳಿತಾಯವಾಗಿದ್ದರೂ, ಹಣವನ್ನು ಖರ್ಚು ಮಾಡಿ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಈವರೆಗೆ ಏಕೆ ಕ್ರಿಯಾಯೋಜನೆ ರೂಪಿಸಿಲ್ಲವೆಂದು ಪ್ರಶ್ನಿಸಿ, ಸಂಬಂಧಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಕ್ರಿಯಾಯೋಜನೆಗೆ ಕೂಡಲೆ ಅನುಮೋದನೆ ಪಡೆದು ನೀರಿನ ವ್ಯವಸ್ಥೆ ಕಲ್ಪಿಸುವ ಕಡೆ ಗಮನ ಹರಿಸಬೇಕೆಂದು ಸೂಚಿಸಿದರು.
ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ನಿರ್ಮಾಣ ಮಾಡಿಕೊಳ್ಳಲು ಜಿಲ್ಲೆಯಲ್ಲಿ 367 ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೆ 87 ಪಾಲಿಹೌಸ್‌ಗಳು ಮಾತ್ರ ಆರಂಭವಾಗಿವೆ ಎಂಬುದಾಗಿ ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದಾಗ ಮಧ್ಯ ಪ್ರವೇಶಿಸಿದ ಸಚಿವರು, ಒಂದು ಪಾಲಿಹೌಸ್ ನಿರ್ಮಾಣಕ್ಕೆ 34 ಲಕ್ಷ ರೂ. ಖರ್ಚು ಬರಲಿದೆ. ಇದರಲ್ಲಿ ಶೇ.50 ರಷ್ಟು ಅನುದಾನವನ್ನು ಇಲಾಖೆ ನೀಡಲಿದೆ. ಉಳಿದ ಅನುದಾನಕ್ಕೆ ಬ್ಯಾಂಕ್ ಸಾಲ ಪಡೆದು ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಲ್ಲದೆ, ಸರಕಾರದ ಸಹಾಯ ಧನದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಬ್ಯಾಂಕುಗಳು ಕಡ್ಡಾಯವಾಗಿ ಸಾಲ ನೀಡಲು ಲೀಡ್‌ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ನಿರ್ಮಾಣಕ್ಕೆ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಕೂಡಲೆ ಕಾರ್ಯಾರಂಭ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರಲ್ಲದೆ, ನೆಲಮಂಗಲ, ಹೊಸಕೋಟೆ ತಾಲೂಕುಗಳಿಗೆ ತಲಾ 12ರಂತೆ ಅಂಬೇಡ್ಕರ್ ಭವನ ಮಂಜೂರಾಗಿದ್ದು ನಿವೇಶನಗಳನ್ನು ಗುರುತಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.
ಡಯಾಲಿಸಿಸ್ ಚಿಕಿತ್ಸೆಗೆ ಬಹಳ ಬೇಡಿಕೆ ಇರುವುದರಿಂದ ಪ್ರತಿ ತಾಲೂಕಿನಲ್ಲಿ ಒಂದು ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಬೇಕು. ಖಾಸಗಿಯವರ ಕಡೆಯಿಂದಲೂ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲು ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ ಅವರು, 2011ರ ಜನಗಣತಿ ಅನ್ವಯ ಜಿಲ್ಲೆಯಲ್ಲಿ 2.24 ಲಕ್ಷ ಕುಟಂಬಗಳಿವೆ. ಆದರೆ, 2.43 ಲಕ್ಷ ರೇಶನ್‌ಕಾರ್ಡ್ ವಿತರಿಸಲಾಗಿದೆ. ಇದರಿಂದಾಗಿ ಬೋಗಸ್ ಕಾರ್ಡ್‌ಗಳಿಗೆ ಕಡಿವಾಣ ಹಾಕಬೇಕೆಂದು ಸೂಚಿಸಿದರು.
ಸಭೆಯಲ್ಲಿ ಶಾಸಕರುಗಳಾದ ವೆಂಕಟರಮಣಯ್ಯ, ಎನ್.ನಾಗರಾಜು, ಪಿಳ್ಳಮುನಿಶಾಮಪ್ಪ, ಡಾ.ಕೆ.ಶ್ರೀನಿವಾಸಮೂರ್ತಿ, ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಸಿಇಓ ಸಿ.ಪಿ. ಶೈಲಜಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.