ಭೂತಾನ್ ಬಾಲಕನ ಅಪಹರಣ ಪ್ರಕರಣ: ಮೂವರ ಬಂಧನ

Update: 2016-03-16 17:46 GMT

ಬೆಂಗಳೂರು, ಮಾ. 16: ಭೂತಾನ್ ದೇಶದ ಬಾಲಕನನ್ನು ಅಪಹರಿಸಿ ಹಣ ವಸೂಲಿ ಮಾಡಿದ್ದ ಪ್ರಕರಣದ ಸಂಬಂಧ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಹಾಗೂ ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅಸ್ಸಾಂ ರಾಜ್ಯದ ರೈತಚಿರಾಂಗ್ ಜಿಲ್ಲೆಯ ಬೊಬೆನ್ ಮುಶಾಯ್ (43), ಜೆಲ್ಸನ್ ಬೋಸ್ ಮೊತೋರಿ(20), ನರ್ಸವಾನ್ ನರ್‌ಜಾರಿ (25) ಎಂದು ಪೊಲೀಸರು ಗುರುತಿಸಿದ್ದಾರೆ.
ಭೂತಾನ್‌ನ ದೇಶದ ಸಾಮ್‌ಟೆಂಗ್ ಲಿಂಗ್ ಜಿಲ್ಲೆಯ ಹಂದಿ ಸಾಕಣೆ ಘಟಕದ ಮಾಲಕನ ಮಗನಾದ ಅಜಿತ್‌ರಾಯ್(16) ಹಾಗೂ ಮನೆ ಕೆಲಸಗಾರ ಬೋಲ್ ಬಹದ್ದೂರ್ ಎಂಬವರನ್ನು ಆರೋಪಿಗಳು ಫೆ.22 ರಂದು ಅಪಹರಿಸಿದ್ದರು. ಬಳಿಕ ಅಸ್ಸಾಂನ ಚಿರಾಂಗ್ ಅರಣ್ಯದಲ್ಲಿ ಬಾಲಕನನ್ನು ಇಟ್ಟುಕೊಂಡು 20 ಲಕ್ಷ ರೂ. ಹಣದ ಬೇಡಿಕೆಯಿಟ್ಟು, ಅಜಿತ್ ರಾಯ್ ತಂದೆಯಿಂದ 20 ಲಕ್ಷ ರೂ. ಹಣ ವಸೂಲಿ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿದ್ದ ಐದು ಆರೋಪಿಗಳನ್ನು ಮೊದಲೇ ಅಸ್ಸಾಂ ಪೊಲೀಸರು ಬಂಧಿಸಿದ್ದು, ಇತರೆ ಮೂವರ ಆರೋಪಿಗಳು ಬೆಂಗಳೂರಿನ ಆವಲಹಳ್ಳಿ ಸಮೀಪದ ಶೆಡ್‌ನಲ್ಲಿ ನೆಲೆಸಿದ್ದ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಅಸ್ಸಾಂ ಪೊಲೀಸ್ ಠಾಣೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News