ಸಿಬಿಐ ವರದಿಯಂತೆ ಮುಂದಿನ ಕ್ರಮ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಮಾ.16: ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ತನಿಖಾ ವರದಿ ಕೈ ಸೇರಿದ ಬಳಿಕ ರಾಜ್ಯ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಬುಧವಾರ ನಗರದ ಆನಂದ್‌ರಾವ್ ವೃತ್ತದಲ್ಲಿ ಡಿ.ಕೆ.ರವಿಯ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆ ಹಾಗೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಿಬಿಐಗೆ ಪತ್ರ ಬರೆಯಲಾಗಿತ್ತು. ಆದರೆ, ನಮ್ಮ ಬೇಡಿಕೆಯನ್ನು ಸಿಬಿಐ ತಿರಸ್ಕರಿಸಿತು. ಇದೀಗ ಮತ್ತೊಮ್ಮೆ ತನಿಖಾ ವರದಿಯನ್ನು ಶೀಘ್ರದಲ್ಲಿ ನೀಡುವಂತೆ ಒತ್ತಡ ಹೇರಲಾಗುವುದು. ಆದುದರಿಂದ, ಪ್ರತಿಭಟನೆಯನ್ನು ಕೈ ಬಿಡುವಂತೆ ಅವರು ಮನವಿ ಮಾಡಿದರು.
ರಾಜ್ಯ ಸರಕಾರ ರವಿ ಕುಟುಂಬದ ಜೊತೆಗಿದೆ. ಅಗತ್ಯವಾದ ಎಲ್ಲ ನೆರವನ್ನು ಒದಗಿಸಲಾಗುವುದು. ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡುವುದು ಬೇಡ. ತನಿಖಾ ವರದಿ ಕೈ ಸೇರಿದ ಬಳಿಕವಷ್ಟೇ ಸ್ಪಷ್ಟ ವಿಷಯ ಹೊರಗೆ ಬರಲಿದೆ ಎಂದು ಪರಮೇಶ್ವರ್ ಹೇಳಿದರು.
ಗೃಹ ಸಚಿವರ ಮನವಿಗೆ ಒಪ್ಪದ ರವಿ ತಾಯಿ ಗೌರಮ್ಮ, ತನ್ನ ಮಗ ಸಾವನ್ನಪ್ಪಿ ಒಂದು ವರ್ಷವಾಗಿದೆ. ಆದರೆ, ಈವರೆಗೆ ಸಿಬಿಐ ತನಿಖಾ ವರದಿ ಕೈ ಸೇರಿಲ್ಲ. ಇನ್ನೊಂದು ವಾರದಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಮೃತದೇಹವನ್ನು ಹೊರಗೆ ತೆಗೆದು ವಿಧಾನಸೌಧದ ಮುಂದಿಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ರವಿಯ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ. ಆದುದರಿಂದ, ಮತ್ತೊಮ್ಮೆ ಶವ ಪರೀಕ್ಷೆ ನಡೆಯಬೇಕು. ಆಗ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಗೌರಮ್ಮ ಸರಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರವಿ ಕುಟುಂಬಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.