×
Ad

ನ್ಯಾಪ್‌ಕಿನ್ ತಯಾರಿಕಾ ಘಟಕ ಸ್ಥಾಪನೆ ಕೈ ಬಿಟ್ಟ ಸರಕಾರ

Update: 2016-03-17 23:38 IST

-ಪ್ರಭಾಕರ ಟಿ.
ಬೆಂಗಳೂರು, ಮಾ. 17: ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರಿಗೆ ಸ್ವಂತ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ರಾಜ್ಯ ಸರಕಾರ ಹಿಂದಿನ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದ ‘ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕಾ ಘಟಕ ಸ್ಥಾಪನೆ’ ಯೋಜನೆಯನ್ನು ಕೈಬಿಟ್ಟಿದೆ.

ಸ್ತ್ರೀಶಕ್ತಿ ಗುಂಪುಗಳ ಮೂಲಕ ರಾಜ್ಯದ ಮೂವತ್ತು ಜಿಲ್ಲೆಗಳ 50ತಾಲೂಕುಗಳಲ್ಲಿ ‘ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕಾ ಘಟಕ’ಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಸರಕಾರ 2014-15ನೆ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಅಲ್ಲದೆ, ಘಟಕ ಸ್ಥಾಪನೆ ಕುರಿತು ಆಡಳಿತಾತ್ಮಕ ಮಂಜೂರಾತಿ ನೀಡಿ ಹಾಗೂ ಯೋಜನೆಯ ಮಾರ್ಗಸೂಚಿ ನಿಗದಿಪಡಿಸಿ ಸುತ್ತೂಲೆಯನ್ನೂ ಹೊರಡಿಸಿತ್ತು. ಆದರೆ, ಇದೀಗ ಕಚ್ಚಾ ಸಾಮಗ್ರಿ ಸಮಸ್ಯೆ, ಉದ್ದಿಮೆ ಲಾಭದಾಯಕವಲ್ಲ ಎಂಬುದು ಸೇರಿ ಕೆಲ ನೆಪಗಳನ್ನು ಮುಂದಿಟ್ಟುಕೊಂಡು ಮಹಿಳೆಯ ಆರೋಗ್ಯ ದೃಷ್ಟಿಯಿಂದ ರೂಪಿಸಿದ್ದ ಮಹತ್ವದ ಯೋಜನೆಯನ್ನು ಕೈಬಿಟ್ಟಿದೆ. ಅದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿಯೇ ಎಂಬುದು ವಿಶೇಷ.
ಯೋಜನೆ ಕೈಬಿಡಲು ಕಾರಣ:  ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿಗಳು ರಾಜ್ಯದಲ್ಲಿ ಸಿಗುವುದಿಲ್ಲ. ಈ ಪರಿಣಾಮ ಕಚ್ಚಾ ಸಾಮಗ್ರಿಗಳಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದುದರಿಂದ ಉತ್ಪಾದನಾ ವೆಚ್ಚ ದುಪ್ಪಟ್ಟಾಗಲಿದೆ. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಂದ ಉತ್ಪಾದಿಸುವ ನ್ಯಾಪ್‌ಕಿನ್‌ಗಳ ಗುಣಮಟ್ಟದ ಬಗ್ಗೆ ವಿಶ್ವಾಸಾರ್ಹತೆ ಹಾಗೂ ಮಾರುಕಟ್ಟೆ ಸಮಸ್ಯೆ ಹಿನ್ನೆಲೆಯಲ್ಲಿ ಯೋಜನೆಗೆ ಏಳ್ಳು-ನೀರು ಬಿಡಲಾಗಿದೆ.
ಮಾರುಕಟ್ಟೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದು, ಸ್ತ್ರೀಶಕ್ತಿ ಗುಂಪುಗಳ ನಿರಾಸಕ್ತಿ ಹಾಗೂ ಉತ್ಪಾದನೆ ದೋಷಗಳ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತೀರ್ಮಾನ ಕೈಗೊಂಡಿದ್ದಾರೆ.
ಸಭೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ಇತ್ತೀಚೆಗೆ ನಡೆಸಿದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಉದ್ದೇಶಿತ ‘ಸ್ಯಾನಿಟರಿ ನ್ಯಾಪ್‌ಕಿನ್ ಯೋಜನೆ’ ಲಾಭದಾಯಕವಲ್ಲ. ಆದುದರಿಂದ ಯೋಜನೆ ಸ್ಥಗಿತಗೊಳಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅದರಂತೆ ಈ ಹಿಂದೆ ಹೊರಡಿಸಿದ್ದ ಸರಕಾರಿ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರ ಕಚೇರಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದಕ್ಕೆ ಸರಕಾರದಿಂದ ಒಪ್ಪಿಗೆ ದೊರಕಿದ್ದು, ಸ್ತ್ರೀಶಕ್ತಿ ಗುಂಪು, ಒಕ್ಕೂಟಗಳ ಮೂಲಕ 50 ತಾಲೂಕುಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಘಟಕ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ಹೊರಡಿಸಿದ್ದ ಕಾರ್ಯಕ್ರಮ ಹಿಂತೆಗೆದುಕೊಂಡಿದೆ.
 ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಶುಚಿ ಕಾರ್ಯಕ್ರಮದಡಿ ಈಗಾಗಲೇ ಮಹಿಳೆಯರಿಗೆ ಮತ್ತು ವಸತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೆ ಈ ಯೋಜನೆ ಅಡಿ ಸಿದ್ಧಪಡಿಸುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಅಧಿಕ ವೆಚ್ಚ ತಗಲುವುದರಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಬೇಕಾಗುತ್ತದೆ. ಈ ಪರಿಣಾಮ ಸಗಟು ಮಾರಾಟಗಾರರು ಮತ್ತು ಗ್ರಾಹಕರು ಕೊಳ್ಳಲು ಹಿಂದೆ ಸರಿಯುವ ಪರಿಣಾಮ ಈ ಯೋಜನೆ ಲಾಭದಾಯಕವಲ್ಲ ಎಂದು ಕೈಬಿಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಯೋಜನಾ ವಿಭಾಗದ ನಿರ್ದೇಶಕಿ ಶಶಿಕಲಾ ಹೇಳುತ್ತಾರೆ.
ಸುಳ್ಳು ಭರವಸೆ: ಈ ಯೋಜನೆಯಡಿ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಿತ್ತು. ಆದರೆ, ಯೋಜನೆಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಸರಕಾರ ನೀಡಿದ್ದ ಭರವಸೆಯೂ ಸುಳ್ಳಾಗಿದೆ.

ಸ್ಯಾನಿಟರಿ ನ್ಯಾಪ್‌ಕಿನ್ ಘಟಕಗಳ ಸ್ಥಾಪನೆ ಯೋಜನೆಯನ್ನು ರಾಜ್ಯ ಸರಕಾರ ಕೈಬಿಟ್ಟಿರುವುದರಿಂದ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರಿಗೆ ಹಿನ್ನಡೆಯಾಗಲಿದೆ. ಇದನ್ನು ಲಾಭದ ದೃಷ್ಟಿಯಿಂದ ನೋಡದೆ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಯೋಜನೆ ಅನುಷ್ಠಾನಗೊಳಿಸಬೇಕು’
-ಲಲಿತಮ್ಮ, ಪ್ರತಿನಿಧಿ, ಸ್ವ ಸಹಾಯ ಸ್ತ್ರೀ ಶಕ್ತಿ ಸಂಘಟನೆ

ಗ್ರಾಮೀಣ ಪ್ರದೇಶದ ಸ್ತ್ರೀ ಸಂಘಟನೆಗಳ ಸದಸ್ಯರು ತಯಾರಿಸುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಕಳಪೆ ಗುಣಮಟ್ಟ ಮತ್ತು ಅಸುರಕ್ಷಿತ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಈ ಯೋಜನೆಯಿಂದ ಹಿಂದೆ ಸರಿಯಲಾಗಿದೆ.
-ಶಶಿಕಲಾ, ಸ್ತ್ರೀಶಕ್ತಿ ಯೋಜನಾ ನಿರ್ದೇಶಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News