ನ್ಯಾ.ಜಗನ್ನಾಥ್ ಶೆಟ್ಟಿ ವರದಿ ತಿರಸ್ಕಾರಕ್ಕೆ ಸಂಪುಟ ನಿರ್ಧಾರ
ಬೆಂಗಳೂರು, ಮಾ.17: ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಜಗನ್ನಾಥ್ ಶೆಟ್ಟಿ ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಸಿದ್ದಲಿಂಗಪ್ಪ ಚೂರಿ ರೈತನಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಘಟನಾವಳಿಗಳಿಗೂ, ವರದಿಗೂ ಸಾಮ್ಯತೆಯಿಲ್ಲದಿರುವ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕರಿಸಲು ತೀರ್ಮಾನಿಸಲಾಗಿದೆ.
ನ್ಯಾ.ಜಗನ್ನಾಥ್ ಶೆಟ್ಟಿ ಆಯೋಗದ ಈ ವರದಿಯನ್ನು ಸದನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಸಚಿವಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೋಲ್ ಸಂಗ್ರಹ: ಬಾಗೇವಾಡಿ-ಸವದತ್ತಿ(63.29 ಕಿ.ಮೀ), ಬೀದರ್-ಚಿಂಚೋಳಿ(60.04 ಕಿ.ಮೀ),ಹಾಸನ-ಪಿರಿಯಾಪಟ್ಟಣ(73 ಕಿ.ಮೀ), ಹಿರೇಕೆರೂರು- ರಾಣೆಬೆನ್ನೂರು(58 ಕಿ.ಮೀ) ಸೇರಿದಂತೆ 363 ಕಿ.ಮೀ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಹಾಸನ ಥರ್ಮಲ್ ಪ್ರಾಜೆಕ್ಟ್ ಪ್ರೈ.ಲಿ.ಗೆ ವಿದ್ಯುತ್ ಯೋಜನೆ ಆರಂಭಕ್ಕೆ 1997ರಲ್ಲಿ ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕಂಪೆನಿ 5 ಕೋಟಿ ರೂ.ಪಾವತಿಸಿತ್ತು. ಆದರೆ, ನಂತರ ಯೋಜನೆಯನ್ನು ಆರಂಭಿಸಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನಾ ಯೋಜನೆಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಈ ಯೋಜನೆಗೆ ನೀಡಿದ್ದ 480 ಎಕರೆ ಜಮೀನನ್ನು ಮರು ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕೆಎಎಸ್ ಜೂನಿಯರ್ ಕೇಡರ್‌ಗಳನ್ನು ಖಾಲಿ ಹುದ್ದೆಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದು. ರಾಜ್ಯ ಸರಕಾರದ ವತಿಯಿಂದ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಟೆಕ್ನಾಲಜಿ ಸಂಸ್ಥೆ ಆರಂಭಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ 20 ಕೋಟಿ ರೂ.ಹಾಗೂ ನಾಲ್ಕು ಎಕರೆ ಜಮೀನನ್ನು ಮೀಸಲಿಡಲಾಗಿತ್ತು. ಆದರೆ, ಯಾರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸರಕಾರದ ವತಿಯಿಂದ ಏರೋಸ್ಪೇಸ್ ಸಂಸ್ಥೆ ಆರಂಭಕ್ಕೆ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಗದಗ ಜಿಲ್ಲೆಯಲ್ಲಿ 350 ಎಕರೆ ಪ್ರದೇಶದಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಕಿಮ್ಸ್ ಸ್ಥಾಪನೆಗೆ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ರೇಷ್ಮೆ ಇಲಾಖೆ ಗಣಿಕೀಕರಣಕ್ಕೆ ಮರು ಟೆಂಡರ್ ಕರೆಯಲು ಆದೇಶ ನೀಡಲಾಗಿದೆ. ಅಲ್ಲದೆ, ಕರ್ತವ್ಯದಲ್ಲಿದ್ದ ಸಂದರ್ಭದಲ್ಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ದೊಡ್ಡಬಳ್ಳಾಪುರ ಪಿಎಸ್ಸೈ ಜಗದೀಶ್ ಕುಟುಂಬಕ್ಕೆ ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯ ಮೊದಲನೆ ಹಂತದಲ್ಲಿ 40/60 ವಿಸ್ತೀರ್ಣದ ನಿವೇಶನವನ್ನು ಉಚಿತವಾಗಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಡಿ.ಕೆ.ರವಿ ಅಸಹಜ ಸಾವು ಪ್ರಕರಣ: ಐಎಎಸ್ ಅಧಿಕಾರಿ ಡಿ.ಕೆ.ರವಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ತ್ವರಿತವಾಗಿ ನೀಡುವಂತೆ ಸಿಬಿಐಗೆ ಪತ್ರ ಬರೆಯುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಡಿ.ಕೆ.ರವಿ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಸಿದ ಮುಖ್ಯಮಂತ್ರಿ, ಆತ್ಮಹತ್ಯೆಯಾಗಿರುವ ಸಾಧ್ಯತೆಯಿರುವುದರಿಂದ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಬಿಐ ತನಿಖಾ ವರದಿ ನೀಡುವವರೆಗೆ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಆದಷ್ಟು ಶೀಘ್ರದಲ್ಲೇ ವರದಿ ನೀಡುವಂತೆ ಸಿಬಿಐಗೆ ಮತ್ತೊಂದು ಪತ್ರ ಬರೆಯುವಂತೆ ಜಯಚಂದ್ರ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
100 ಮೊರಾರ್ಜಿ ದೇಸಾಯಿ ಶಾಲೆಗಳು
ರಾಜ್ಯದಲ್ಲಿ ಹೊಸದಾಗಿ 100 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಆರಂಭಿಸಲು ನಿರ್ಧರಿಸಲಾಗಿದ್ದು, ಈ ಪೈಕಿ 75 ಎಸ್ಸಿ ಹಾಗೂ 25 ಎಸ್ಟಿಗೆ ಮೀಸಲಾಗಿದೆ. ಪ್ರತಿ ಶಾಲೆಗೆ ತಲಾ 10 ಕೋಟಿ ರೂ.ಅನುದಾನ ನೀಡಲು ಸಮ್ಮತಿ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.