ಹೆಚ್ಚುವರಿ ಪದಾಧಿಕಾರಿಗಳ ನೇಮಕ: ವೈ.ಸಯೀದ್‌ಅಹ್ಮದ್
ಬೆಂಗಳೂರು, ಮಾ.17: ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಸಲಹಾ ಮಂಡಳಿಗೆ ಹೆಚ್ಚುವರಿಯಾಗಿ ನಾಲ್ವರು ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ವಿಭಾಗದ ಅಧ್ಯಕ್ಷ ವೈ.ಸಯೀದ್‌ಅಹ್ಮದ್ ತಿಳಿಸಿದ್ದಾರೆ.
ಗುರುವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಡಾ.ಝಹಿರುದ್ದೀನ್ ಅಹ್ಮದ್, ಜೋಸ್ಫರ್ಡ್ ಎಂ.ಫೆರ್ನಾಂಡಿಸ್, ಚಿಕ್ಕಬಳ್ಳಾಪುರದ ಸಿ.ಜೆ.ರಾಯಪ್ಪ ಹಾಗೂ ಮಂಗಳೂರಿನ ಬಿ.ಇಬ್ರಾಹೀಮ್‌ರನ್ನು ನೇಮಕ ಮಾಡಲಾಗಿದೆ ಎಂದರು.
ಇದಲ್ಲದೆ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗಕ್ಕೆ ಐವರು ಉಪಾಧ್ಯಕ್ಷರು, 21 ಮಂದಿ ಸಂಚಾಲಕರು, ರಾಮನಗರ, ರಾಯಚೂರು, ಕೋಲಾರ, ಮೈಸೂರು ಗ್ರಾಮಾಂತರ ಹಾಗೂ ಧಾರವಾಡದ ಜಿಲ್ಲಾಧ್ಯಕ್ಷರು ಮತ್ತು ಕರಾವಳಿ ವಿಭಾಗಕ್ಕೆ ಒಬ್ಬ ಅಧ್ಯಕ್ಷರನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ ಎಂದು ಸಯೀದ್ ಅಹ್ಮದ್ ತಿಳಿಸಿದರು.
ತರಬೇತಿ ಶಿಬಿರ: ಅಲ್ಪಸಂಖ್ಯಾತರ ವಿಭಾಗದ ಎಲ್ಲ ಪದಾಧಿಕಾರಿಗಳಿಗೆ ಎರಡು ದಿನಗಳ ತರಬೇತಿ ಶಿಬಿರವನ್ನು ಎಪ್ರಿಲ್ ಮೊದಲ ವಾರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಸರಕಾರದ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯದಲ್ಲಿರುವ ಯೋಜನೆ, ಕಾರ್ಯಕ್ರಮಗಳ ಮಾಹಿತಿಯನ್ನು ಒಳಗೊಂಡ ಪುಸಕ್ತವನ್ನು ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಹೊರತರಲಾಗುವುದು. ಅಲ್ಲದೆ, ಅಲ್ಪಸಂಖ್ಯಾತರ ವಿಭಾಗದ ವೆಬ್‌ಸೈಟ್ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೆ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ವಿಭಾಗದ ಅಧ್ಯಕ್ಷ ಮುದಬ್ಬೀರ್ ಅಹ್ಮದ್‌ಖಾನ್, ರಾಜ್ಯ ಉಪಾಧ್ಯಕ್ಷ ಎ.ಜೆ.ಅಕ್ರಮ್‌ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕರಾವಳಿ ವಿಭಾಗದ ಅಧ್ಯಕ್ಷರನ್ನಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಇಸ್ಮಾಯೀಲ್ ಎನ್. ಎಂಬವರನ್ನು ನೇಮಕ ಮಾಡಲಾಗಿದೆ.
-ವೈ.ಸಯೀದ್‌ಅಹ್ಮದ್,ಅಧ್ಯಕ್ಷ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ