ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
ಬೆಂಗಳೂರು, ಮಾ.18: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಒಟ್ಟಾರೆಯಾಗಿ 7,922 ಕೋಟಿ ರೂ. ಗಳನ್ನು ಒದಗಿಸಲಾಗಿದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-3ರಲ್ಲಿ 2,795 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಲು ಅರ್ಹವಾಗಿರುವ 1,520 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು 3,500 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-2 ರ ಬಾಕಿಉಳಿದಿರುವ 131 ಕಿ.ಮೀ. ಉದ್ದದ ರಸ್ತೆಯನ್ನು 262 ಕೋಟಿ ರೂ.ವೆಚ್ಚದಲ್ಲಿ 2016-17ನೆ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಕೆಆರ್‌ಡಿಸಿಎಲ್ ವತಿಯಿಂದ 2016-17ನೆ ಸಾಲಿನಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಸವಳಂಗ-ಹೊನ್ನಾಳಿ ನಡುವಿನ 48 ಕಿ.ಮೀ ಉದ್ದದ ರಸ್ತೆ, 155 ಕೋಟಿ ರೂ.ಗಳ ವೆಚ್ಚದಲ್ಲಿ ಸಿಂಧನೂರು-ಕುಷ್ಟಗಿ ನಡುವಿನ 63 ಕಿ.ಮೀ ಉದ್ದದ ರಸ್ತೆ ಹಾಗೂ 130 ಕೋಟಿ ರೂ.ವೆಚ್ಚದಲ್ಲಿ ಕೂಡ್ಲಿಗಿ - ಸಂಡೂರು -ತೋರಣಗಲ್ಲು ನಡುವಿನ 40 ಕಿ.ಮೀ ಉದ್ದದ ರಸ್ತೆಯನ್ನು ಪೂರ್ಣಗೊಳಿಸಲಾಗುವುದು.
ರಾಯಚೂರು ಪಟ್ಟಣದಲ್ಲಿ ರಾ.ಹೆ-167 ನ್ನು ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲು 48 ಕೋಟಿ ರೂ.ಗಳ ಮೊತ್ತದ ಕಾಮಗಾರಿಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದ್ದು, 2016-17ನೆ ಸಾಲಿನಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಕಲಬುರಗಿ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು ಯೋಜನಾ ವರದಿ ತಯಾರಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಅನುಮೋದನೆ ದೊರೆತಿದ್ದು, ಡಿಪಿಆರ್ ತಯಾರಿಕೆ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ 212ರ ಕೊಳ್ಳೇಗಾಲ - ಕೇರಳ ಗಡಿವರೆಗಿನ 130 ಕಿ.ಮೀ ರಸ್ತೆಯನ್ನು ರೂ.585 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಈ ರಸ್ತೆ 2016-17ನೆ ಸಾಲಿನಲ್ಲಿ ಪೂರ್ಣಗೊಳ್ಳಲಿದೆ.