ಸಾಮಾಜಿಕ ನ್ಯಾಯ-ಬಜೆಟ್ ಅಡಿಪಾಯ
ಬೆಂಗಳೂರು, ಮಾ.18: ಕೃಷಿ, ನೀರಾವರಿ, ಶಿಕ್ಷಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯಕ್ಕೆ ತಮ್ಮ ದಾಖಲೆಯ 11ನೆ ರಾಜ್ಯ ಬಜೆಟ್‌ನಲ್ಲಿ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವಕಾಶ ವಂಚಿತರ, ಶೋಷಿತರ ಅಭ್ಯುದಯದ ತಳಹದಿಯ ಮೇಲೆ ಆಧುನಿಕ ಕರ್ನಾಟಕದ ಅಭಿವೃದ್ಧಿ ಸೌಧ ನಿರ್ಮಿಸುವ ಪಣತೊಟ್ಟಿದ್ದಾರೆ.
ಮುಖ್ಯಮಂತ್ರಿಯಾಗಿ ನಾಲ್ಕನೆ ಹಾಗೂ ಒಟ್ಟಾರೆ 11ನೆ ಬಜೆಟ್‌ನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಸಿದ್ದರಾಮಯ್ಯ, ಡಿವಿಜಿಯವರ ‘ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ, ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ, ಜಸವು ಜನಜೀವನಕೆ- ಮಂಕುತಿಮ್ಮ’ ಕವನ ವಾಚಿಸುವ ಮೂಲಕ ಬಜೆಟ್ ಮಂಡನೆ ಆರಂಭಿಸಿದರು.
ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆ, ಗ್ರಾಮೀಣಾ ಭಿವೃದ್ಧಿ ಹಾಗೂ ರೈತರು, ಶೋಷಿತರು ಮತ್ತು ಮಹಿಳಾ ಪರ ಚಿಂತನೆಗಳಿಗೆ ನವ ಕರ್ನಾಟಕದ ಮುನ್ನೋಟವನ್ನು ಬೆಸುಗೆ ಮಾಡಿ ರಾಜ್ಯದ ಸಮಾನ ಮತ್ತು ಸಮಗ್ರ ಬೆಳವಣಿಗೆಗೆ ಶ್ರಮಿಸುವ ವಾಗ್ದಾನವನ್ನು ಮುಖ್ಯಮಂತ್ರಿ ನೀಡಿದ್ದಾರೆ.
ಮೈಸೂರು ನಗರವು ಸ್ವಚ್ಛ ಭಾರತ್ ಯೋಜನೆಯಡಿ ಸತತವಾಗಿ ಎರಡನೆ ಬಾರಿಯೂ ರಾಷ್ಟ್ರದ ಸ್ವಚ್ಛ ನಗರಗಳ ಪೈಕಿ ಪ್ರಥಮ ಸ್ಥಾನ ಪಡೆದಿದೆ. ಗ್ರಾಮೀಣ ಶೌಚಾಲಯ ನಿರ್ಮಾಣದಲ್ಲಿ ಕರ್ನಾಟಕವು ರಾಷ್ಟ್ರದಲ್ಲಿಯೆ ಅತಿ ಹೆಚ್ಚು ಶೌಚಾಲಯ ಗಳನ್ನು ನಿರ್ಮಿಸಿ ದಾಖಲೆ ಮಾಡಿದೆ. ಉತ್ತಮ ಆಡಳಿತದಲ್ಲಿ ಕರ್ನಾಟಕವು ಭಾರತದ ಮೂರನೆ ಮುಂಚೂಣಿ ರಾಜ್ಯವಾಗಿದೆ.
ಯಾವ ಕ್ಷೇತ್ರಕ್ಕೆ ಎಷ್ಟು?
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - 17,373 ಕೋಟಿ ರೂ.
ನಗರಾಭಿವೃದ್ಧಿ - 14,853 ಕೋಟಿ ರೂ.
ಜಲಸಂಪನ್ಮೂಲ - 14,477 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ - 13,018 ಕೋಟಿ ರೂ.
ಇಂಧನ - 12,632 ಕೋಟಿ ರೂ.
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ - 7,911 ಕೋಟಿ ರೂ.
ಕಂದಾಯ - 5,532 ಕೋಟಿ ರೂ.
ಸಮಾಜಕಲ್ಯಾಣ - 5, 464 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ - 5,032 ಕೋಟಿ ರೂ.
ಉನ್ನತ ಶಿಕ್ಷಣ - 4,651 ಕೋಟಿ ರೂ.
ಒಳಾಡಳಿತ - 4,462 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ - 4,497 ಕೋಟಿ ರೂ.
ಕೃಷಿ - 4,344 ಕೋಟಿ ರೂ.
ವಸತಿ - 3,890 ಕೋಟಿ ರೂ.
ಹಿಂದುಳಿದ ವರ್ಗಗಳ ಕಲ್ಯಾಣ - 2,503 ಕೋಟಿ ರೂ.
ಆಹಾರ ಮತ್ತು ನಾಗರಿಕ ಸರಬರಾಜು - 2,096 ಕೋಟಿ ರೂ.
ಪಶುಸಂಗೋಪನೆ - 1886 ಕೋಟಿ ರೂ.
ಯೋಜನೆ ಮತ್ತು ಪ್ರದೇಶಾಭಿವೃದ್ಧಿ - 1,816 ಕೋಟಿ ರೂ.
ವಾಣಿಜ್ಯ ಮತ್ತು ಕೈಗಾರಿಕೆ - 1, 814 ಕೋಟಿ ರೂ.
ವೈದ್ಯಕೀಯ ಶಿಕ್ಷಣ - 1,614 ಕೋಟಿ ರೂ.
ಅರಣ್ಯ, ಪರಿಸರ ಮತ್ತು ವನ್ಯಜೀವಿ - 1,609 ಕೋಟಿ ರೂ.
ಸಹಕಾರ - 1,463 ಕೋಟಿ ರೂ.
ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ -1,374 ಕೋಟಿ ರೂ.
ಕಾರ್ಮಿಕ, ಉದ್ಯೋಗ ಮತ್ತು ತರಬೇತಿ - 1,017 ಕೋಟಿ ರೂ.
ಮೂಲ ಸೌಲಭ್ಯ ಅಭಿವೃದ್ಧಿ - 780 ಕೋಟಿ ರೂ.
ತೋಟಗಾರಿಕೆ - 753 ಕೋಟಿ ರೂ.
ಸಾರಿಗೆ - 671 ಕೋಟಿ ರೂ.
ಪ್ರವಾಸೋದ್ಯಮ - 507 ಕೋಟಿ ರೂ.
ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ - 500 ಕೋಟಿ ರೂ.
ರೇಷ್ಮೆ - 367 ಕೋಟಿ ರೂ.
ಕನ್ನಡ ಮತ್ತು ಸಂಸ್ಕೃತಿ - 341 ಕೋಟಿ ರೂ.
ಮೀನುಗಾರಿಕೆ - 302 ಕೋಟಿ ರೂ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ - 222 ಕೋಟಿ ರೂ.
ಕ್ರೀಡಾ ಮತ್ತು ಯುವಜನ ಸೇವೆ - 170 ಕೋಟಿ ರೂ.
ವಾರ್ತಾ ಇಲಾಖೆ - 156 ಕೋಟಿ ರೂ.
ಇ ಆಡಳಿತ - 115 ಕೋಟಿ ರೂ.
♦ ಇಳಿಕೆ
ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು, ಅಕ್ಕಿ ಮತ್ತು ಗೋಧಿ ಪದಾರ್ಥಗಳು. ಜೋಳದ ರೊಟ್ಟಿ, ರಾಗಿ ರೊಟ್ಟಿ, ಅಲ್ಯೂಮಿನಿಯಂ ಗೃಹೋಪಯೋಗಿ ಪಾತ್ರೆಗಳು (ಪ್ರೆಷರ್‌ಕುಕ್ಕರ್ ಮತ್ತು ಕಟ್ಲರಿ ಹೊರತುಪಡಿಸಿ), ಹತ್ತಿ ಮೇಲಿನ ತೆರಿಗೆ ಶೇ.5ರಿಂದ ಶೇ.2ಕ್ಕೆ ಇಳಿಕೆ. ಕಾಗದದ ಉತ್ಪನ್ನಗಳ ಮೇಲಿನ ತೆರಿಗೆ ವಿನಾಯಿತಿ. ಚಟ್ನಿ ಪುಡಿ, ಕಾಗದ ಮತ್ತು ಕಾಗದ ಬೋರ್ಡ್‌ಗಳಿಂದ ತಯಾರಿಸಿದ ಕಚೇರಿ ಬಳಕೆಯ ಫೈಲ್‌ಗಳು, ನಿಕ್ಕೆಲ್ ಮತ್ತು ಟೈಟಾನಿಯಂ ವಸ್ತುಗಳು, ರಬ್ಬರ್‌ಶೀಟ್ ಮಾಡುವ ಹಸ್ತ ಚಾಲಿತ ಯಂತ್ರ, ಸೆಟ್‌ಟಾಪ್‌ಬಾಕ್ಸ್, ಅಡಲ್ಟ್ ಡಯಾಪರ್, ಶಸ್ತ್ರಚಿಕಿತ್ಸೆಗೆ ಬಳಸಲ್ಪಡುವ ಉಪಕರಣಗಳು, ಮಲ್ಟಿಮೀಡಿಯಾ ಸ್ಪೀಕರ್‌ಗಳು, ಹೆಲ್ಮೆಟ್ ಹಾಗೂ ಎಲ್‌ಇಡಿ ಬಲ್ಬ್‌ಗಳ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ.
♦ ಏರಿಕೆ
ಅಲ್ಕೋಹಾಲ್ ರಹಿತ ಪಾನೀಯಗಳ ಮೇಲಿನ ತೆರಿಗೆ ಶೇ.14.5ರಿಂದ ಶೇ.20ಕ್ಕೆ ಏರಿಕೆ. ಪೆಟ್ರೋಲ್ ಮೇಲಿನ ತೆರಿಗೆ ಶೇ.26ರಿಂದ 30ಕ್ಕೆ ಹೆಚ್ಚಳ, ಡೀಸೆಲ್ ಮೇಲಿನ ತೆರಿಗೆ ಶೇ.16.65ರಿಂದ ಶೇ.19ಕ್ಕೆ ಹೆಚ್ಚಳ. ಇದರಿಂದಾಗಿ, ಪೆಟ್ರೋಲ್ ಬೆಲೆಯಲ್ಲಿ 1.89 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 0.98ರಷ್ಟು ಹೆಚ್ಚಳವಾಗಲಿದೆ. ಮನರಂಜನಾ ತೆರಿಗೆ ಶೇ.6ರಿಂದ ಶೇ.10ಕ್ಕೆ ಹೆಚ್ಚಳ. ಮದ್ಯದ ಮೇಲಿನ ಅಬಕಾರಿ ಸುಂಕ 45 ರೂ.ಗಳಿಂದ 50 ರೂ.ಗಳಿಗೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕ 5 ರೂ.ಗಳಿಂದ 10 ರೂ.ಗಳಿಗೆ ಹೆಚ್ಚಳ. ಮದ್ಯದ ಎಲ್ಲ 17 ಸ್ಲಾಬ್‌ಗಳ ಮೇಲಿನ ಹೆಚ್ಚುವರಿ ಸುಂಕ ಶೇ.4ರಿಂದ 12ಕ್ಕೆ ಹೆಚ್ಚಳ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.135 ರಿಂದ ಶೇ.150ಕ್ಕೆ ಹೆಚ್ಚಳ. ಸ್ಪಿರಿಟ್(ಎಥನಾಲ್ ಹೊರತುಪಡಿಸಿ) ರಫ್ತು ಪ್ರತಿ ಲೀಟರ್‌ಗೆ 2 ರೂ.ಮತ್ತು ಆಮದು ಪ್ರತಿ ಲೀಟರ್‌ಗೆ 1 ರೂ. ತೆರಿಗೆ. ಮದ್ಯದ ಎಲ್ಲ 17 ಸ್ಲಾಬ್‌ಗಳ ಘೋಷಿತ ಬೆಲೆಯನ್ನು ತಲಾ 35 ರೂ.ಗಳಂತೆ ಹೆಚ್ಚಳ. ಮದ್ಯ ಮಾರಾಟದ ಪರವಾನಿಗೆ ದರ ಶೇ.25ರಷ್ಟು ಹೆಚ್ಚಳ.
ಖಾಸಗಿ ವಾಹನಗಳ ತೆರಿಗೆಯನ್ನು ಪ್ರತಿ ಆಸನಕ್ಕೆ 600 ರೂ.ಗಳಿಂದ 900 ರೂ.ಗಳವರೆಗೆ ಹೆಚ್ಚಳ. ಖಾಸಗಿ ನಗರ ಸಾರಿಗೆ ವಾಹನಗಳ ತೆರಿಗೆಯನ್ನು 350 ರೂ.ಗಳಿಂದ 450 ರೂ.ಹೆಚ್ಚಳ. ಒಪ್ಪಂದ ವಾಹನಗಳ ತೆರಿಗೆಯನ್ನು ಪ್ರತಿ ಆಸನಕ್ಕೆ 1 ಸಾವಿರ ರೂ.ಗಳಿಂದ 1,500 ರೂ.ಗಳಿಗೆ ಹೆಚ್ಚಳ. ಅಖಿಲ ಭಾರತ ಪ್ರವಾಸಿ ವಾಹನಗಳ ತೆರಿಗೆಯನ್ನು ಪ್ರತಿ ಆಸನಕ್ಕೆ 2,750 ರೂ.ಗಳಿಂದ 3,500 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಶೇಷ ಪರವಾನಿಗೆ ಹೊಂದಿರುವ ವಾಹನಗಳ ತೆರಿಗೆಯನ್ನು ಪ್ರತಿ ಆಸನಕ್ಕೆ 1 ಸಾವಿರ ರೂ.ಗಳಿಂದ 1,500 ರೂ.ಗೆ ಏರಿಕೆ ಮಾಡಲಾಗಿದೆ.
♦♦♦
ಕೌಶಲ್ಯಾಭಿವೃದ್ಧಿ, ಜೀವನೋಪಾಯ ಇಲಾಖೆ ಸ್ಥಾಪನೆ
ಯುವಜನರಿಗೆ ಉದ್ಯೋಗ ಪಡೆಯಲು ಅಗತ್ಯವಾದ ಕುಶಲತೆ ಮತ್ತು ಪರಿಣಿತಿ ಒದಗಿಸಲು ಪ್ರತ್ಯೇಕ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸ್ಥಾಪನೆ ಮಾಡಲು ಪ್ರಸ್ತಾಪಿಸಲಾಗಿದೆ.