ಕಾರ್ಮಿಕ, ಉದ್ಯೋಗ ಮತ್ತು ತರಬೇತಿ
ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ವಿಮಾ ಯೋಜನೆಯಡಿ ನೋಂದಣಿ ಮಾಡಿರುವ 12 ಲಕ್ಷ ಆಟೊ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ನೀಡಿ ಅವರನ್ನು ‘ಅಪಘಾತ ಜೀವ ರಕ್ಷಕ’ರನ್ನಾಗಿಸಲು 1 ಕೋಟಿ ರೂ.ಅನುದಾನ ಒದಗಿಸಲಾಗಿದೆ. 17 ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸುವುದು, ಇ-ಕಾರ್ಮಿಕ ಸೇವೆಯೊಂದಿಗೆ ಇನ್ನು 7 ಹೊಸ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲು ನಿರ್ಧರಿಸಲಾಗಿದೆ.
ಕಾರ್ಖಾನೆಗಳ ಲೈಸನ್ಸ್ ನೋಂದಣಿ, ನವೀಕರಣ, ಕಾರ್ಖಾನೆಗಳ ಮತ್ತು ಬಾಯ್ಲರ್‌ಗಳ ನಕ್ಷಾನುಮೋದನೆ ಮತ್ತು ಬಾಯ್ಲರ್‌ಗಳ ದಢೀಕರಣ ಸೇವೆಗಳಿಗೆ ಆನ್‌ಲೈನ್ ಶುಲ್ಕ ಪಾವತಿ ವ್ಯವಸ್ಥೆ ರೂಪಿಸುವುದು. ವಿವಿಧ ಕ್ಷೇತ್ರಗಳಲ್ಲಿ ಹೊಸ ಕೌಶಲ್ಯ ಶಿಕ್ಷಣ ನೀಡಲು ದೇವರಾಜ ಅರಸು ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಶಿಕ್ಷಣ ಸಂಶೋಧನಾ ಸಂಸ್ಥೆಯನ್ನು ಐದು ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಭಾರತೀಯ ಸೇನಾಪಡೆ ಮತ್ತು ಅರೆಸೇನಾಪಡೆಗಳಿಗೆ ಸೇರ್ಪಡೆಗೊಳ್ಳಲು ‘ಭಾರತೀಯ ಸೇನೆಯಲ್ಲಿ ಕನ್ನಡಿಗ’ ಎಂಬ ಕಾರ್ಯಕ್ರಮದಡಿಯಲ್ಲಿ 1,500 ಕನ್ನಡಿಗ ಅಭ್ಯರ್ಥಿಗಳಿಗೆ ನೇಮಕಾತಿ ಪೂರ್ವ ತರಬೇತಿ ನೀಡಲು ಎರಡು ಕೋಟಿ ರೂ.ಅನುದಾನ ಒದಗಿಸಲಾಗಿದೆ. 2016-17ನೆ ಸಾಲಿನಲ್ಲಿ ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆಗೆ ಒಟ್ಟಾರೆಯಾಗಿ 1,017 ಕೋಟಿ ರೂ.ಗಳನ್ನು ಒದಗಿಸಲಾಗಿದೆ.