ಎಲ್ಲರನ್ನು ಒಳಗೊಳ್ಳುವ ದೂರದೃಷ್ಟಿ ಕಲ್ಪನೆಯ ಆಯವ್ಯಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣನೆ
ಬೆಂಗಳೂರು, ಮಾ. 18: ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂ.ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕ, ಎಲ್ಲರನ್ನೂ ಒಳಗೊಳ್ಳುವ, ಸಾಮಾಜಿಕ ನ್ಯಾಯ ಕಲ್ಪನೆಯಲ್ಲಿ ದೂರದೃಷ್ಟಿಯುಳ್ಳ ಮುಂಗಡ ಪತ್ರ ಮಂಡಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2016-17ನೆ ಸಾಲಿನ ಆಯವ್ಯಯ ಮಂಡಿಸಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1,63,419 ಕೋಟಿ ರೂ.ಗಾತ್ರದ ಆಯವ್ಯಯ ಮಂಡಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ 20,885 ಕೋಟಿ ರೂ.ಹೆಚ್ಚಾಗಿದ್ದು, ಶೇ.14.65ರಷ್ಟು ಏರಿಕೆಯಾಗಿದೆ ಎಂದರು.
ರಾಜ್ಯ ಯೋಜನಾ ಗಾತ್ರ 85,375 ಕೋಟಿ ರೂ.ಗಳಾಗಿದ್ದು 2015-16ನೆ ಸಾಲಿಗೆ ಹೋಲಿಸಿದರೆ ಶೇ.17.6ರಷ್ಟು ಹೆಚ್ಚಳವಾಗಿದೆ. ಹೀಗಾಗಿ ಮೇಲಿನ ಅಂಕಿ-ಅಂಶಗಳನ್ನು ಗಮನಿಸಿದರೆ ಸಮಗ್ರ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪೂರಕ ಎಂಬುದು ಸ್ಪಷ್ಟ ಎಂದು ಸಿದ್ದರಾಮಯ್ಯ ಹೇಳಿದರು.
ಅಬಕಾರಿ, ವಾಣಿಜ್ಯ, ಮಾರಾಟ, ಮುದ್ರಾಂಕ ಮತ್ತು ನೋಂದಣಿ, ಮೋಟಾರ್ ವಾಹನ ತೆರಿಗೆ ಸೇರಿದಂತೆ ಸಂಪನ್ಮೂಲ ಕ್ರೋಡೀಕರಣಕ್ಕೆ ಕಳೆದ ಸಾಲಿನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಹಿನ್ನೆಲೆಯಲ್ಲಿ 877 ಕೋಟಿ ರೂ. ತೆರಿಗೆ ಸಂಗ್ರಹ ಖೋತಾ ಮಧ್ಯೆ 75,568 ಕೋಟಿ ರೂ.2015-16ನೆ ಸಾಲಿನಲ್ಲಿ ತೆರಿಗೆ ಸಂಗ್ರಹಿಸುವ ಮೂಲಕ ಶೇ.99ರಷ್ಟು ಗುರಿ ಸಾಧಿಸಿದ್ದೇವೆ ಎಂದು ಹೇಳಿದರು.
ವಿತ್ತಿಯ ಶಿಸ್ತಿನಲ್ಲೇ ಸಾಲ: ರಾಜ್ಯದಲ್ಲಿ ಸಾಲದ ಹೊರೆ ಹೆಚ್ಚಾಗಿದೆ ಎಂಬ ವಿಪಕ್ಷಗಳ ಆರೋಪದಲಿ ಯಾವುದೇ ಹುರುಳಿಲ್ಲ. ಬಜೆಟ್ ಗಾತ್ರ ಹೆಚ್ಚಿದ್ದು, ಜಿಡಿಪಿಯೂ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ 2.08 ಲಕ್ಷ ಕೋಟಿ ರೂ. ಸಾಲದ ಹೊರೆ ಎಂದು ಭಾವಿಸಲಾಗಿದೆ. ಆದರೆ, ಮಾರ್ಗಸೂಚಿ ಮಿತಿಯಲ್ಲೇ ಸಾಲ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ಕೃಷಿ, ತೋಟಗಾರಿಕೆ, ನೀರಾವರಿ, ಪಶು ಸಂಗೋಪನೆ, ಆರೋಗ್ಯ, ಕೈಗಾರಿಕೆ, ಇಂಧನ ಸೇರಿದಂತೆ ಆದ್ಯತಾ ವಲಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿಗೂ ಆದ್ಯತೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ನುಡಿದರು.
ನೀರಾವರಿಗೆ 5 ವರ್ಷಗಳಲ್ಲಿ ಕನಿಷ್ಠ 50 ಸಾವಿರ ಕೋಟಿ ರೂ.ನೀಡುವ ಘೋಷಣೆ ಮಾಡಿದ್ದು, ನಾಲ್ಕು ವರ್ಷಗಳಲ್ಲಿ ಒಟ್ಟು 40,931 ಕೋಟಿ ರೂ.ನೀಡಿದ್ದೇವೆ. ಆ ಮೂಲಕ ನಮ್ಮ ಬದ್ಧತೆ ಸಾಬೀತು ಮಾಡಿದ್ದು, 1ವರ್ಷ ಮೊದಲೇ ನಿಗದಿತ ಗುರಿ ಸಾಧಿಸಲಿದ್ದೇವೆ. ಅಲ್ಲದೆ, ನಮ್ಮ ಆಡಳಿತಾವಧಿಯಲ್ಲಿ ನೀರಾವರಿಗೆ 60 ಸಾವಿರ ಕೋಟಿ ರೂ. ಹೆಚ್ಚಾಗಲಿದೆ ಎಂದರು.
ರಾಜ್ಯದಲ್ಲಿನ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ‘ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ’ಯನ್ನು ಹೊಸದಾಗಿ ಸೃಷ್ಟಿಸಿದ್ದು, ಕೈಗಾರಿಕೆಗಳಿಗೆ ಅಗತ್ಯ ಕೌಶಲ್ಯವುಳ್ಳ ಅಭ್ಯರ್ಥಿಗಳನ್ನು ಸಿದ್ಧಪಡಿಸಲಾಗುವುದು ಎಂದು ಸಿದ್ಧರಾಮಯ್ಯ ವಿವರ ನೀಡಿದರು.
ಪರಿಶಿಷ್ಟರಿಗೆ ಭರಪೂರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ (ಎಸ್ಟಿಪಿ-ಟಿಎಸ್ಪಿ) ಪ್ರಸಕ್ತ ಸಾಲಿಗೆ 17,706 ಕೋಟಿ ರೂ.ಗಳು ಕಳೆದ ವರ್ಷದ ಉಳಿಕೆ ಮೊತ್ತ ಸೇರಿದಂತೆ ಒಟ್ಟು 19,543 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಪ್ರಸಕ್ತ ಸಾಲಿಗೆ ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ರಾಜ್ಯದಲ್ಲಿನ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ಅಹಿಂದ ವರ್ಗ ಮಾತ್ರವಲ್ಲದೆ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರನ್ನೂ ಒಳಗೊಳ್ಳುವ ಆಯವ್ಯಯ ಮಂಡಿಸಿದ್ದೇನೆ ಎಂದ ಅವರು, ಏಕೀಕರಣ ಆಗಿ 60ನೆ ವರ್ಷದ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು 30 ಕೋಟಿ ರೂ.ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಬಡ-ಮಾಧ್ಯಮ ವರ್ಗದ ಜನರಿಗೆ ಯಾವುದೇ ತೆರಿಗೆ ಹೊರೆಯನ್ನು ಹೇರಿಲ್ಲ. ಆದರೆ, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆಯನ್ನು ಕ್ರಮವಾಗಿ 1.89 ರೂ. ಹಾಗೂ 98 ಪೈಸೆ ಹೆಚ್ಚಳ ಮಾಡಿದ್ದು, ಅದರಿಂದ ಬರುವ 850 ಕೋಟಿ ರೂ.ತೆರಿಗೆ ಹಣವನ್ನು ಹಳ್ಳಿಗಾಡಿನ ರಸ್ತೆಗಳ ಅಭಿವೃದ್ಧಿ ಬಳಕೆ ಮಾಡಲಾಗುವುದು ಎಂದು ಸಿಎಂ ಸ್ಪಷ್ಟನೆ ನೀಡಿದರು.
ಬೆಂಗಳೂರು ಮಹಾ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಒಟ್ಟಾರೆ 4,222.73 ಕೋಟಿ ರೂ.ಒದಗಿಸಿದ್ದು, ನಗರದ ನಾಲ್ಕು ಪ್ರಮುಖ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ‘ಬ್ರಾಂಡ್ ಬೆಂಗಳೂರು’ ವರ್ಚಸ್ಸಿಗೆ ಹೊಸ ತೇಜಸ್ಸು ಮೂಡಿಸಲು ಸರಕಾರ ಉದ್ದೇಶಿಸಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಯಾವುದೇ ‘ಭಾಗ್ಯ’ ಯೋಜನೆಗಳನ್ನು ಘೋಷಿಸಿಲ್ಲ. ಆದರೆ, ‘ಭಾಗ್ಯ’ಗಳಿಂದ ಇದೀಗ ‘ಸೌಭಾಗ್ಯ’ಗಳತ್ತ ನಮ್ಮ ಸರಕಾರ ಸಾಗುತ್ತಿದೆ ಎಂದ ಸಿದ್ಧರಾಮಯ್ಯ, ಪ್ರಸಕ್ತ ಸಾಲಿನ ಆಯವ್ಯಯ ಅಭಿವೃದ್ಧಿಗೆ ಪೂರಕ ಬೆಳವಣಿಗೆಗೆ ನಾಂದಿಯಾಗಲಿದ್ದು, ನಿರೀಕ್ಷಿತ ಫಲ ದೊರೆಯಲಿದೆ ಎಂದು ಭರವಸೆಯಿಂದ ನುಡಿದರು.
ಸುದ್ದಿಗೋಷ್ಠಿಯಲ್ಲಿ ವಾರ್ತಾ ಸಚಿವ ಆರ್.ರೋಷನ್ ಬೇಗ್, ಶಾಸಕರಾದ ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ನರಸಿಂಹರಾಜು ಸೇರಿದಂತೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.