ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರಕಾರಗಳು ಉಳಿಯುವುದಿಲ್ಲ: ಎಚ್.ಡಿ.ದೇವೇಗೌಡ
ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಸಾಲ ಮನ್ನಾ ಬೆಂಗಳೂರು, ಮಾ.19: ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರಕಾರಗಳು ಇಲ್ಲಿಯವರೆಗೆ ಯಾವೂದೂ ಉಳಿದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ 'ಸಂಘಟನಾ ಸಮಾವೇಶ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಬಂದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದರಿಂದ, ರೈತರು ಬೇಸತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರಗಳು ಇಲ್ಲಿಯವರೆಗೆ ಉಳಿದಿಲ್ಲ ಎಂದು ಅಭಿಪ್ರಾಯಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಜಾತಿ ರಾಜಕಾರಣ ಹಾಗೂ ಹಣದ ರಾಜಕಾರಣ ಮಾಡುತ್ತಿದ್ದು, ಇದರಿಂದ ರಾಜ್ಯದ ಜನರು ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮುನ್ಸೂಚನೆ ನೀಡುತ್ತಿದ್ದಾರೆ ಎಂದು ಹೇಳಿದರು.
ಅಧಿವೇಶನ ಮುಗಿದ ಮೇಲೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಮಾಡುತ್ತೇನೆ. ಅಲ್ಲದೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಕಡಿಮೆ ಸ್ಥಾನಗಳು ಬಂದಿವೆಯೆಂದು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಪಕ್ಷವನ್ನು ಪುನಃ ಸಂಘಟಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಎತ್ತಿನ ಹೊಳೆ ಯೋಜನೆ ಜಾರಿಗೆ 1800 ಕೋಟಿ ರೂ.ಮೀಸಲಿಟ್ಟಿದ್ದರೂ ಇಲ್ಲಿಯವರೆಗೆ ಆ ಭಾಗಗಳ ಜನರಿಗೆ ಕೃಷಿಗೆ ಹಾಗೂ ಕುಡಿಯಲಿಕ್ಕೆ ನೀರು ಸಿಕ್ಕಿಲ್ಲ. ಇದರಿಂದ ಅಲ್ಲಿಯ ಜನರು ಬೇಸತ್ತು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೇಳುತ್ತಾರೆ. ಆದರೆ, ಭವಿಷ್ಯದಲ್ಲಿ ಕಾಂಗ್ರೆಸ್ ನಡಿಗೆ ಆಂಧ್ರಪ್ರದೇಶ, ತೆಲಂಗಾಣ ಕಡೆಗೆ ಸಾಗುವ ಮುನ್ಸೂಚನೆಗಳಿವೆ. ಹೀಗಾಗಿ, ಪಕ್ಷದ ಕಾರ್ಯಕರ್ತರು ಮುಂದಿನ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಗೆ ಮೊಳೆ ಹೊಡೆಯುವುದಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಜಾರಿಗೆ ತಂದಿದ್ದಾರೆ. ಆದರೆ, ಎಚ್.ಡಿ.ದೇವೇಗೌಡ ಅವರು ಲೋಕಾಯುಕ್ತ ಸಂಸ್ಥೆಯು ಸ್ಥಾಪನೆಯಾದಾಗ ಅದನ್ನು ಸ್ವಾಗತಿಸಿ ಆ ಸಂಸ್ಥೆಯ ಬೆಳವಣಿಗೆಗೆ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.
ಅರ್ಕಾವತಿ ಬಡಾವಣೆಯ ಕರ್ಮಕಾಂಡದ ತನಿಖೆಯನ್ನು ಕೆಂಪಣ್ಣ ಆಯೋಗ ವಹಿಸಿಕೊಂಡಿದೆ. ಆದರೆ, ಈ ಸರಕಾರ ಅರ್ಕಾವತಿ ಬಡಾವಣೆಗೆ ಸಂಬಂಧಪಟ್ಟ ಯಾವುದೆ ಕಡತಗಳನ್ನು ಕೆಂಪಣ್ಣ ಆಯೋಗಕ್ಕೆ ನೀಡುತ್ತಿಲ್ಲ. ಇದರಿಂದ, ಆಯೋಗದ ನೇತೃತ್ವವನ್ನು ವಹಿಸಿಕೊಂಡವರು ಬೇಸತ್ತಿದ್ದಾರೆ ಎಂದು ವಿವರಿಸಿದರು. ಬಜೆಟ್ ಮಂಡಿಸುವಾಗ ಬೆಂಗಳೂರಿಗೆ 5 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ, ಇಲ್ಲಿಯವರೆಗೆ ಮೀಸಲಿಟ್ಟ ಹಣ ಜಾರಿಗೊಂಡಿಲ್ಲ. ಅಲ್ಲದೆ, ಸರಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
'ರಾಜ್ಯ ಸರಕಾರ ರೈತರ ಮೇಲೆ 2 ಲಕ್ಷ ಕೋಟಿ ರೂ.ಸಾಲವನ್ನು ಹೊರಿಸಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ. ಆದರೆ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ರೈತರ ಸಾಲವನ್ನು ಮನ್ನಾ ಮಾಡುತ್ತದೆ.' -ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಪಕ್ಷದ ನಿರ್ಣಯಗಳು: -
- ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಜೆಡಿಎಸ್ ಪಕ್ಷವು ಬದ್ಧವಾಗಿದ್ದು, ಕರ್ನಾಟಕದ ನೆಲ, ಜಲ ಹಾಗೂ ಭಾಷೆಯ ಸಂರಕ್ಷಣೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸಿ ಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಸರಕಾರವನ್ನು ರಚಿಸಲು ಎಲ್ಲ ಪ್ರಯತ್ನಗಳನ್ನು ಮಾಡಲು ಇಂದಿನ ಸಮಾವೇಶದಲ್ಲಿ ನಿರ್ಣಯಿಸಲಾಗಿದೆ.
- ರಾಷ್ಟ್ರೀಯ ಪಕ್ಷಗಳು ರಾಜ್ಯದ ಮತದಾರರ ಬೆಂಬಲವನ್ನು ಗಳಿಸಿದರೂ ರಾಜ್ಯದ ಅಭಿವೃದ್ಧಿಗೆ ಯಾವುದೆ ಬದ್ಧತೆಯನ್ನು ತೋರದೆ ನಿರಂತರವಾಗಿ ನಮ್ಮ ರಾಜ್ಯಕ್ಕೆ ಅನ್ಯಾಯ ಮತ್ತು ಮೋಸವನ್ನು ಎಸಗುತ್ತಿವೆ. ರಾಷ್ಟ್ರೀಯ ಪಕ್ಷಗಳ ನಿಜಬಣ್ಣವನ್ನು ಬಯಲು ಮಾಡಿ ಕರ್ನಾಟಕದ ಪ್ರಗತಿಗೆ ಜೆಡಿಎಸ್ ಪಕ್ಷವು ಅನಿವಾರ್ಯ ಹಾಗೂ ಅಗತ್ಯ ಎಂಬ ಸತ್ಯವನ್ನು ಜನರಿಗೆ ಮನವರಿಕೆ ಮಾಡಲು ಇಂದಿನ ಸಮಾವೇಶದಲ್ಲಿ ನಿರ್ಣಯಿಸಲಾಗಿದೆ.
- ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜೆಡಿಎಸ್ ಪಕ್ಷಕ್ಕೆ ಸಮಾನ ವಿರೋಧಿ ಪಕ್ಷಗಳಾಗಿದ್ದು, ನಮ್ಮ ಪಕ್ಷಕ್ಕೆ ಯಾವ ಪಕ್ಷದ ಮೇಲೂ ಅತೀ ಪ್ರೀತಿಯಾಗಲಿ ಅಥವಾ ಅತೀ ವಿರೋಧವಾಗಲಿ ಇರುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಅವಕಾಶವಾದ ರಾಜಕಾರಣದ ಪ್ರತಿಬಿಂಬವಾಗಿದ್ದು, ಎರಡೂ ಪಕ್ಷಗಳನ್ನು ದೂರವಿಟ್ಟು ನಮ್ಮ ಸ್ವಂತಿಕೆಯ ಮೇಲೆ ಕರ್ನಾಟಕದ ಜನರ ಸ್ವಾಭಿಮಾನದ ಪ್ರತಿಬಿಂಬವಾಗಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಸಂಘಟಿಸಲು ಇಂದಿನ ಸಮಾವೇಶದಲ್ಲಿ ನಿರ್ಣಯಿಸಲಾಗಿದೆ.