ಐದನೆ ದಿನಕ್ಕೆ ಕಾಲಿಟ್ಟ ಡಿ.ಕೆ.ರವಿ ಕುಟುಂಬದ ಪ್ರತಿಭಟನೆ
ಬೆಂಗಳೂರು, ಮಾ. 19: ನಗರದ ವೌರ್ಯ ವೃತ್ತದಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಸಿಬಿಐ ತನಿಖಾ ವರದಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಐದನೆ ದಿನಕ್ಕೆ ಮುಂದುವರಿದಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ. ರವಿ ತಾಯಿ ಗೌರಮ್ಮ, ತಮ್ಮ ಮಗನ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ವರದಿ ನೀಡಿರುವುದಾಗಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಈ ತನಿಖಾ ವರದಿಯ ಪ್ರತಿಯನ್ನು ಇದುವರೆಗೂ ನಮ್ಮ ಕುಟುಂಬಕ್ಕೆ ತಲುಪಿಸಿಲ್ಲ. ಮಾಧ್ಯಮಗಳಿಗೆ ಮಾಹಿತಿ ಸಿಗುವುದಾದರೆ ಕುಟುಂಬ ಸದಸ್ಯರಿಗೆ ಮಾಹಿತಿ ಪಡೆಯುವ ಹಕ್ಕಿಲ್ಲವೇ ಎಂದು ಆಕ್ರೋಶದಿಂದ ಪ್ರಶ್ನಿಸಿದರು.
ನಾವು ಮಗನ ಸಾವಿಗೆ ಯಾವುದೇ ಸಹಾಯ, ಪರಿಹಾರ ಕೇಳುತ್ತಿಲ್ಲ. ನಮಗೆ ಬೇಕಾಗಿರುವುದು ನ್ಯಾಯ ಮತ್ತು ಸಾವಿನ ಪ್ರಕರಣದ ಸತ್ಯಾಂಶ ಎಂದು ಗೋಗರೆದ ಅವರು, ನಾನು ನನ್ನ ಸೊಸೆಯನ್ನು ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದೇನೆ. ಯಾವುದೇ ಕಿರುಕುಳ ಕೊಟ್ಟಿಲ್ಲ. ಹಾಗಾಗಿ ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆಪಾದನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಜನಸ್ಪಂದನ, ರೈತ ಸಂಘ ಮತ್ತು ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಡಿ.ಕೆ.ರವಿ ಸಾವಿಗೆ ನ್ಯಾಯ ಒದಗಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.