×
Ad

ಸುರಕ್ಷತೆಗಾಗಿ 'ಬಿ-ಸೇಫ್ ಆಟೊರಿಕ್ಷಾ ಮೊಬೈಲ್ ಆ್ಯಪ್' ಬಿಡುಗಡೆ

Update: 2016-03-19 22:40 IST

ಬೆಂಗಳೂರು, ಮಾ. 19: ನಾಗರಿಕರಿಗೆ ಉತ್ತಮ ಸಂಪರ್ಕ ಹಾಗೂ ಸುರಕ್ಷತೆ ಒದಗಿಸುವ ಉದ್ದೇಶದಿಂದ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ವತಿಯಿಂದ 'ಬಿ-ಸೇಫ್ ಆಟೊರಿಕ್ಷಾ ಮೊಬೈಲ್ ಆ್ಯಪ್'ನ್ನು ಬಿಡುಗಡೆ ಮಾಡಲಾಯಿತು.
ಶನಿವಾರ ನಗರ ಸಂಚಾರ ಪೊಲೀಸ್ ವಿಭಾಗದ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ 'ಬಿ-ಸೇಫ್ ಆಟೊರಿಕ್ಷಾ ಮೊಬೈಲ್ ಆ್ಯಪ್' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್‌ಅಧಿಕಾರಿಗಳು ಪಾಲ್ಗೊಂಡು ಆ್ಯಪ್ ಕಾರ್ಯವೈಖರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಡಾ.ರಾಮೇಗೌಡ, ಆಟೊರಿಕ್ಷಾ ಚಾಲಕರ ಹಿತಕ್ಕೆ ಹಾಗೂ ಸಾರ್ವಜನಿಕರಿಗೆ ಉತ್ತಮ ರಕ್ಷಣೆ ನೀಡುವ ಉದ್ದೇಶದಿಂದ ತಯಾರಿಸಲಾಗಿರುವ 'ಬಿ-ಸೇಫ್ ಆಟೊರಿಕ್ಷಾ ಮೊಬೈಲ್ ಆ್ಯಪ್'ಗೆ ಬೆಂಗಳೂರು ನಾಗರಿಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ರೀತಿಯ ವಾಹನ ಸವಾರರ ಆ್ಯಪ್‌ಗಳನ್ನು ರಾಜ್ಯದ ಪ್ರಮುಖ ನಗರಗಳಿಗೂ ವಿಸ್ತರಿಸಬೇಕಾಗಿದೆ. ಆಟೊ ಚಾಲನೆ ಮಾಡುವರು ಸಹ ಸಾರ್ವಜನಿಕ ವಲಯದಲ್ಲಿದ್ದಾರೆ. ಇಂತಹ ಅಸಂಘಟಿತ ಕಾರ್ಮಿಕರ ಬಗ್ಗೆ ಸಂಚಾರ ಪೊಲೀಸ್ ಇಲಾಖೆ ಕಾಳಜಿ ವಹಿಸುತ್ತಿರುವುದು ಸ್ವಾಗತಾರ್ಹ ಎಂದ ಅವರು, ಇತ್ತೀಚಿಗೆ ಆಟೊ ಚಾಲಕರ ನಡುವಳಿಕೆ ಸುಧಾರಿಸಿದೆ ಎಂದು ಹೇಳಿದರು.

ಸಂಚಾರ ಪೊಲೀಸ್ ವಿಭಾಗದ ಆಯುಕ್ತ ಡಾ.ಎಂ.ಎ.ಸಲೀಂ ಮಾತ ನಾಡಿ, ಆಟೊರಿಕ್ಷಾ ಚಾಲಕರಿಂದ ಸಾರ್ವಜನಿಕರಿಗೆ ಹಲವು ರೀತಿಯ ತೊಂದರೆಗಳಾಗುತ್ತಿರುವುದು ಸಂಚಾರಪೊಲೀಸ್ ವಿಭಾಗದ ಗಮನಕ್ಕೆ ಬಂದಿದೆ. ಹೀಗಾಗಿ, ಸೂಕ್ತ ಪರಿ ಹಾರ ನೀಡುವ ಹಿನ್ನೆಲೆಯಲ್ಲಿ 'ಬಿ-ಸೇಫ್ ಆಟೊರಿಕ್ಷಾ ಮೊಬೈಲ್ ಆ್ಯಪ್' ಬಿಡುಗಡೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ನೀಡಬಹುದಾಗಿದ್ದು, ಆ್ಯಪ್ ಮೂಲಕವೇ ದೂರು ದಾಖಲಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರೀಕ್ಷಕ ಕೆ.ರಾಮಚಂದ್ರರಾವ್, ಸಂಚಾರ ಪೊಲೀಸ್ ವಿಭಾಗದ ಉಪ ಆಯುಕ್ತ ಸಿ.ಕೆ.ಬಾಬಾ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ ಪ್ರಾಮಾಣಿಕ ಆಟೊ ಚಾಲಕ ಝಫರ್ ಎಂಬಾತನನ್ನು ಸನ್ಮಾನಿಸಲಾಯಿತು.

'ಓಲಾ ಸೇರಿದಂತೆ ಇತರೆ ಅಂತಾರಾಷ್ಟ್ರೀಯ ಕಂಪೆನಿಗಳು ಸಾಮಾನ್ಯ ಕಾರ್ಮಿಕರ ನಾಶಕ್ಕೆ ನಿಂತಿವೆ. ಹೀಗಾಗಿ, ದಿನಗೂಲಿ ಕಾರ್ಮಿಕರು ತಂತ್ರಜ್ಞಾನ ಬಳಕೆಯಿಂದ ವೃತ್ತಿಯಲ್ಲಿ ಪ್ರಗತಿ ಸಾಧಿಸಬೇಕು'
-ಡಾ.ರಾಮೇಗೌಡ, ಸಾರಿಗೆ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News