×
Ad

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ, ಸಹಾಯಕ ಪ್ರಾಧ್ಯಾಪಕರ ಅಮಾನತು

Update: 2016-03-19 23:38 IST

ತುಮಕೂರು, ಮಾ.19: ತುಮಕೂರು ವಿವಿ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜಶೇಖರ್ ಅವರನ್ನು ಸೇವೆಯಿಂದ ಅಮಾನತು ಮಾಡಲು ಮತ್ತು ಅವರ ವಿರುದ್ಧ ಬಂದಿರುವ ಲೈಂಗಿಕ ಕಿರುಕುಳ ದೂರನ್ನು ನಿವೃತ್ತ ನ್ಯಾಯಮೂರ್ತಿಗಳ ಏಕಸದಸ್ಯ ಸಮಿತಿಯಿಂದ ತನಿಖೆ ನಡೆಸಲು ಶನಿವಾರ ನಡೆದ ತುಮಕೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿವಿಯ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ರಾಜಶೇಖರ್ ನಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರನ್ನು ಕೆಲ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಸಿಬ್ಬಂದಿ ನೀಡಿದ ಹಿನ್ನೆಲೆಯಲ್ಲಿ ವರದಿ ನೀಡಲು ರಚನೆಯಾಗಿದ್ದ ಸಮಿತಿ ನೀಡಿದ ವರದಿಯನ್ನು ಶನಿವಾರ ನಡೆದ ಸಿಂಡಿಕೇಟ್ ಸಭೆಯಲ್ಲಿಟ್ಟು ಕೂಲಂಕಶ ಚರ್ಚೆ ನಡೆಸಲಾಯಿತು.
ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ. ಅಲ್ಲದೆ, ಸದರಿ ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಏಕಸದಸ್ಯ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತುಮಕೂರು ವಿವಿ ಕುಲಸಚಿವರು ತಿಳಿಸಿದ್ದಾರೆ.
ತುಮಕೂರು ವಿವಿಯಲ್ಲಿ ಇತ್ತೀಚೆಗೆ ನಡೆದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಕೆಲ ಸ್ನಾತಕೋತ್ತರ ವಿದ್ಯಾರ್ಥಿನಿಯರು ಕುಲಪತಿಗಳಿಗೆ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜಶೇಖರ್ ವಿರುದ್ಧ ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದರು.
ದೂರು ದಾಖಲೆಯಾದ ನಂತರ ಸ್ವಯಂ ಪ್ರೇರಿತವಾಗಿ ಭೇಟಿ ನೀಡಿದ್ದ ಮಹಿಳಾ ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮತ್ತು ತಂಡ ಕುಲಪತಿಗಳು ಹಾಗೂ ವಿವಿ ಲೈಂಗಿಕ ದೌರ್ಜನ್ಯ ತಡೆ ಸಮಿತಿಯೊಂದಿಗೆ ಚರ್ಚೆ ನಡೆಸಿ ಸಮಿತಿ ನೀಡಿದ ವರದಿ ಅನ್ವಯ ತುರ್ತು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ತುಮಕೂರು ವಿವಿ ಮಹಿಳಾ ಲೈಂಗಿಕ ದೌರ್ಜನ್ಯ ತಡೆ ಸಮಿತಿ ನೀಡಿದ ವರದಿಯನ್ನು ಇಂದಿನ ಸಿಂಡಿಕೇಟ್ ವಿಶೇಷ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News