ಹೆತ್ತೇನಹಳ್ಳಿ ಅಗ್ನಿಕೊಂಡ ದುರಂತ
ತುಮಕೂರು, ಮಾ.19: ತಾಲೂಕಿನ ಹೆತ್ತೇನಹಳ್ಳಿಯಲ್ಲಿ ಶಿವರಾತ್ರಿಯಂದು ನೂಕುನುಗ್ಗಲಿನಿಂದ ಸಂಭವಿಸಿದ ಅಗ್ನಿಕೊಂಡ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವ ಆವಶ್ಯಕತೆಯಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹೆತ್ತೇನಹಳ್ಳಿ ಜಾತ್ರೆಯ ಅಗ್ನಿಕೊಂಡಕ್ಕೆ ಬಿದ್ದು ಗಾಯಗೊಂಡವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಂಬರುವ ದಿನಗಳಲ್ಲಿ ಇಂತಹ ದುರಂತಗಳು ನಡೆಯದಂತೆ ಮುಂಜಾಗ್ರತೆ ಕ್ರಮವಹಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿರುವ ಮೂಢನಂಬಿಕೆಗಳನ್ನು ಪಟ್ಟಿ ಮಾಡಿ ವೌಢ್ಯ ನಿಷೇಧ ಕಾಯ್ದೆ ಜಾರಿಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.ಕೊಂಡ ಹಾಯುವುದೂ ಕೂಡ ಮೂಢನಂಬಿಕೆಗಳ ಪಟ್ಟಿಯಲ್ಲಿ ಬಂದರೆ ಕಾನೂನು ಚೌಕಟ್ಟಿನ ಪ್ರಕಾರ ನಿಷೇಧಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಸದ್ಯ ಈ ಅಗ್ನಿ ಅವಘಡದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಇವರಿಗೆ ಹೆಚ್ಚಿನ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗುವುದು. ಸುಟ್ಟ ಗಾಯಗಳಿಗೆ ಎಷ್ಟು ಪರಿಹಾರ ನೀಡಬೇಕೆಂದು ನಿಯಮಗಳಿದ್ದು, ಅದರನ್ವಯ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ತಾಲೂಕಿನ ಸೀತಕಲ್ ಬಳಿ ಶುಕ್ರವಾರ ಗಾರ್ಮೆಂಟ್ಸ್ ್ಯಾಕ್ಟರಿಯ ಕಾರ್ಮಿಕರನ್ನು ಕರೆ ತರುತ್ತಿದ್ದ ಬಸ್ ಪಲ್ಟಿಯಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದವರನ್ನು ಭೇಟಿ ಮಾಡಿ ಧೈರ್ಯ ಹೇಳಿದ ಸಚಿವರು, ಮದ್ಯಪಾನ ಮಾಡಿದ ಹಾಗೂ ಪರವಾನಿಗೆ ಹೊಂದಿರದ ಚಾಲಕನ ಅಜಾಗರೂಕ ವಾಹನ ಚಾಲನೆಯಿಂದ ಈ ಅವಘಡ ಸಂಭವಿಸಿದೆ. ಬಸ್ ಮಾಲಕ ಹಾಗೂ ಚಾಲಕನ ವಿರುದ್ಧ ಕೂಡಲೇ ಕ್ರಮ ಜರಗಿಸಲಾಗುವುದು ಎಂದರು.