ವಿಧಾನಸಭೆಯಲ್ಲಿಂದು ಎಸಿಬಿ ಗದ್ದಲ ಸಾಧ್ಯತೆ
ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ
ಬೆಂಗಳೂರು, ಮಾ. 20: ವಿಧಾನಸಭೆ ಕಲಾಪ ಮಾ.21ರಂದು ಬೆಳಗ್ಗೆ 11ಗಂಟೆಯಿಂದ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಸಂತಾಪ ಸೂಚನೆ ಬಳಿಕ ಪ್ರಶ್ನೋತ್ತರ ಕಲಾಪ ಜರಗಲಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಎಸ್. ಮೂರ್ತಿ ತಿಳಿಸಿದ್ದಾರೆ.
ಆ ಬಳಿಕ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2016-17ನೆ ಸಾಲಿನ ಆಯವ್ಯಯ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದ್ದು, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಮಾತನಾಡಲಿದ್ದಾರೆ.
ವಿಧಾನಸಭೆ ಕಾರ್ಯಕ್ರಮ ಪಟ್ಟಿಯಲ್ಲಿ ಸಂತಾಪ ಸೂಚನೆ, ಪ್ರಶ್ನೋತ್ತರ, ವಿತ್ತೀಯ ಕಲಾಪ, ಶಾಸನ ರಚನೆ ಹಾಗೂ ಆರು ಗಮನ ಸೆಳಯುವ ಸೂಚನೆಗಳು ಇವೆ ಎಂದು ಮೂರ್ತಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರಿಷ್ಠರ ಆಕ್ಷೇಪ: ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡುವ ಸಂಬಂಧ ಪಕ್ಷ ಹೈಕಮಾಂಡ್‌ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕಾಂಗ್ರೆಸ್ ವರಿಷ್ಠರು ಆಕ್ಷೇಪಿಸಿದ್ದಾರೆ. ಇದರಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ಅಲ್ಲದೆ, ಸಾರ್ವಜನಿಕ ವಲಯದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.
ಎಸಿಬಿ ಗದ್ದಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವನ್ನು ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ರಚನೆಗೆ ಮುಂದಾಗಿರುವ ವಿಚಾರವೂ ವಿಧಾನಸಭೆ ಯಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ. ಈ ವಿಷಯ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ಯುದ್ಧವೂ ನಡೆಯುವ ಸಾಧ್ಯತೆಗಳಿವೆ.