×
Ad

ಕೇಂದ್ರ ಸಚಿವ ಡಿವಿಎಸ್ ಮನೆಗೆ ರವಿ ಕುಟುಂಬ ಮುತ್ತಿಗೆ

Update: 2016-03-20 22:53 IST

ಬೆಂಗಳೂರು, ಮಾ.20: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ತನಿಖೆಯನ್ನು ಸಿಬಿಐ ಮುಗಿಸಿದರೂ ತನಿಖಾ ವರದಿಯನ್ನು ಬಹಿರಂಗ ಪಡಿಸುತ್ತಿಲ್ಲ ಎಂದು ಆರೋಪಿಸಿ ಡಿ.ಕೆ.ರವಿ ಕುಟುಂಬದ ಸದಸ್ಯರು ಹಾಗೂ ಅವರ ಅಭಿಮಾನಿಗಳು ನಗರದ ಭೂಪಸಂದ್ರದಲ್ಲಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಿವಾಸಕ್ಕೆ ಮುತ್ತಿಗೆ ಹಾಕಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಗಳನ್ನು ಕೂಗಿದರು.
   ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ರವಿ ಅವರ ತಂದೆ ಕರಿಯಪ್ಪ, ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಕಿವಿಗೊಡುತ್ತಿಲ್ಲ. ಹೀಗಾಗಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಮನೆಯ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.   
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ಅನಂತ ಕುಮಾರ್ ಅವರು ಮಧ್ಯ ಪ್ರವೇಶಿಸಿ ರವಿ ಅವರಿಗೆ ನ್ಯಾಯ ಒದಗಿಸಿ ಕೊಟ್ಟರೆ ಪ್ರತಿಭಟನೆಯನ್ನು ಕೈಬಿಡುತ್ತೇವೆ. ಇಲ್ಲವಾದರೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು. ಪಂಚಾಯತ್ ಕಾವಲು ಸಮಿತಿ ಜಿಲ್ಲಾಧ್ಯಕ್ಷ ಜಯರಾಂ ಮಾತನಾಡಿ, ಮೈಸೂರಿನಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನ ಪರವಾಗಿ ಇಡೀ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ, ಈ ನಾಡಿಗಾಗಿ ಶ್ರಮಿಸಿದ ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಪರವಾಗಿ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು. ರವಿ ಸಾವಿನ ಬಗ್ಗೆ ಸಿಬಿಐನವರು ತನಿಖಾ ವರದಿಯನ್ನು ಬಹಿರಂಗಪಡಿಸುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ ಹಾಗೂ ಇಬ್ಬರು ಕೇಂದ್ರಸಚಿವರುಗಳೂ ಸ್ಥಳಕ್ಕೆ ಭೇಟಿ ನೀಡಿ ರವಿ ಅವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಡಿ.ಕೆ.ರವಿಗೆ ನ್ಯಾಯ ಕೊಡಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಹಾಗೂ ಈ ಪ್ರತಿಭಟನೆಗೆ ಕಡಿವಾಣ ಹಾಕಲು ಸಚಿವರು ರಾಜಕೀಯ ತಂತ್ರವನ್ನು ಹೂಡಿದರೆ ಪ್ರತಿಭಟನಾಕಾರರ ಎದುರು ಅವುಗಳು ಫಲಿಸುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News