×
Ad

ಇನ್‌ಸ್ಪೆಕ್ಟರ್ ಸೇರಿ 6 ಸಿಬ್ಬಂದಿ ಅಮಾನತು

Update: 2016-03-20 23:09 IST

ಬೆಂಗಳೂರು, ಮಾ.20: ಆಭರಣ ಕಳವು ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಜೀವನ್‌ಭೀಮಾನಗರ ಠಾಣಾ ಇನ್‌ಸ್ಪೆಕ್ಟರ್ ಸೇರಿ 6 ಜನ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಜೀವನ್‌ಭೀಮಾನಗರ ಠಾಣಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ರಾಜಶೇಖರ್, ಇನ್‌ಸ್ಪೆಕ್ಟರ್ ಹಿತೇಂದ್ರ, ಪೊಲೀಸ್ ಪೇದೆಗಳಾದ ಏಜಾಜ್, ಕೇಶವ್‌ರಾಜ್, ಮುರಳಿ, ಸಿದ್ದಪ್ಪ ಎಂಬವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಪ್ರಕರಣದ ಹಿನ್ನೆಲೆ: ಕೆಲಸ ಮಾಡುತ್ತಿದ್ದ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪದ ಮೇಲೆ ಜೆಬಿ ಠಾಣಾ ಪೊಲೀಸರು ಆರೋಪಿ ಮಹೇಂದ್ರ ಎಂಬಾತನನ್ನು ಮಾ.19ರ ರಾತ್ರಿ ಠಾಣೆಗೆ ಕರೆತಂದಿದ್ದಾರೆ.
ಈ ವೇಳೆ ಮಹೇಂದ್ರನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಒರಿಸ್ಸಾ ಮೂಲದ ಮಹೇಂದ್ರ 12 ವರ್ಷಗಳಿಂದ ಇಲ್ಲಿನ ಎಚ್‌ಎಎಲ್ ನಿವಾಸಿಯೊಬ್ಬರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಆತ ಆಭರಣಗಳನ್ನು ಕಳವು ಮಾಡಿದ್ದಾನೆ ಎಂದು ಆರೋಪಿಸಿ ಮನೆ ಮಾಲಕ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ನೀಡಿದ ಹಿನ್ನೆಲೆಯಲ್ಲಿ ಮಹೇಂದ್ರನನ್ನು ಬಂಧಿಸಿದ್ದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಮಹೇಂದ್ರ ಠಾಣೆಯ ಲಾಕಪ್‌ನಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣದ ತನಿಖೆಯು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News