×
Ad

ನಕಲಿ ಬಂಗಾರದ ಬಳೆ ಅಡಮಾನವಿಟ್ಟು ಸಂಸ್ಥೆಗೆ ಭಾರೀ ವಂಚನೆ

Update: 2016-03-20 23:22 IST

ರಾಷ್ಟ್ರ-ರಾಜ್ಯ ಮಟ್ಟದಲ್ಲಿ ವ್ಯಾಪಿಸಿದ ಚೀಟಿಂಗ್ ♦ ಮಹಾರಾಷ್ಟ್ರ ಮೂಲದ ಗ್ಯಾಂಗ್‌ನ ಕೃತ್ಯ ಶಂಕೆ                                                                                  

 ಶಿವಮೊಗ್ಗ,ಮಾ.20: ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಕಲಿ ಬಂಗಾರ ಬಳೆಗಳನ್ನು ಅಡಮಾನವಿಟ್ಟು ಖಾಸಗಿ ಹಣಕಾಸು ಸಂಸ್ಥೆಗೆ ಪಂಗನಾಮ ಹಾಕಿರುವ ಘಟನೆ ಶಿವಮೊಗ್ಗ ನಗರದಲ್ಲಿ ಬೆಳಕಿಗೆ ಬಂದಿದ್ದು, ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಈ ವಂಚನೆ ವ್ಯಾಪಿಸಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಸಂಬಂಧ ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಕ್ಷ ಪೊಲೀಸ್ ಅಧಿಕಾರಿ ಖ್ಯಾತಿಯ ಸಬ್ ಇನ್‌ಸ್ಪೆಕ್ಟರ್ ಅಭಯ ಪ್ರಕಾಶ ಸೋಮನಾಳ್‌ರವರು ವಂಚಕರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಈ ನಡುವೆ ರಾಜ್ಯದ ಇತರೆ ನಗರಗಳಲ್ಲಿಯೂ ಇದೇ ರೀತಿಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗೆ ವಂಚನೆ ಮಾಡಿರುವ ಅಂಶ ತಿಳಿದುಬಂದಿದೆ. ಮಹಾರಾಷ್ಟ್ರ ಮೂಲದ ಭಾರೀ ದೊಡ್ಡ ಗ್ಯಾಂಗ್ ಈ ವಂಚನೆಯ ಹಿಂದಿದೆ ಎಂಬ ಮಾಹಿತಿಗಳಿವೆ. ಲಭ್ಯ ಮಾಹಿತಿಯ ಪ್ರಕಾರ, ನಕಲಿ ಬಂಗಾರದ ಬಳೆ ಅಡಮಾನವಿಟ್ಟು ರಾಜ್ಯದ ವಿವಿಧ ನಗರಗಳಲ್ಲಿ ಕೋಟಿ ಕೋಟಿ ರೂ. ಮೊತ್ತದ ವಂಚನೆ ನಡೆಸಲಾಗಿದೆ. ದೇಶದ ಹಲವೆಡೆಯೂ ವಂಚನೆ ಮಾಡಿರುವ ಮಾಹಿತಿಗಳು ಲಭ್ಯವಾಗುತ್ತಿವೆ. ಒಂದೇ ರೀತಿಯ ನಕಲಿ ಬಂಗಾರದ ಬಳೆ ಅಡಮಾನವಿಟ್ಟು ವಂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ದಂಧೆಯ ಹಿಂದೆ ಭಾರೀ ದೊಡ್ಡ ಜಾಲ ಸಕ್ರಿಯ ವಾಗಿರುವ ಶಂಕೆ ವ್ಯಕ್ತವಾಗುತ್ತಿದೆೆ. ಇದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ದಂಧೆಕೋರರ ಕರಾಮತ್ತಿಗೆ ಖಾಸಗಿ ಹಣಕಾಸು ಸಂಸ್ಥೆಯವರೇ ತಬ್ಬಿಬ್ಬುಗೊಳ್ಳುವಂತೆ ಮಾಡಿದೆ. ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ. ಬೆಳಕಿಗೆ: ನಕಲಿ ಬಂಗಾರದ ಬಳೆ ಅಡಮಾನವಿಟ್ಟು ಗೋಲ್ಡ್ ಲೋನ್ ಪಡೆದು ವಂಚಿಸಿದ ಆರೆ

ಪಕ್ಕೆ ಸಂಬಂಧಿಸಿದಂತೆ, ಮೊದಲು ವಿನೋಬನಗರ ಬಡಾವಣೆಯಲ್ಲಿ ಕಾರ್ಯಾಚರಿಸುತ್ತಿರುವ ಮಣಪ್ಪುರಂ ಖಾಸಗಿ ಹಣಕಾಸು ಸಂಸ್ಥೆಯ ಏರಿಯಾ ಮ್ಯಾನೇಜರ್‌ರವರು ದೂರು ನೀಡಿದ್ದಾರೆ. ದೂರಿನಲ್ಲಿ 256 ಗ್ರಾಂ ತೂಕದ ನಕಲಿ ಬಂಗಾರದ ಬಳೆಗಳನ್ನಿಟ್ಟು 4.79 ಲಕ್ಷ ರೂ. ವಂಚಿಸಲಾಗಿದೆ ಎಂದು ದೂರಿದ್ದಾರೆ. ಇದಾದ ನಂತರ ಬಿ.ಎಚ್.ರಸ್ತೆಯಲ್ಲಿರುವ ಎರಡು ಹಾಗೂ ಎನ್.ಟಿ.ರಸ್ತೆಯಲ್ಲಿರುವ ಒಂದು ಮಣಪ್ಪುರಂ ಖಾಸಗಿ ಹಣಕಾಸು ಸಂಸ್ಥೆಯಲ್ಲಿಯೂ ನಕಲಿ ಬಂಗಾರದ ಬಳೆಗಳನ್ನಿಟ್ಟು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಈ ಮೂರು ಅಂಗಡಿಗಳಲ್ಲಿ ಒಟ್ಟಾರೆ 356 ಗ್ರಾಂ ತೂಕದ ನಕಲಿ ಬಂಗಾರದ ಬಳೆ ಅಡಮಾನವಿಟ್ಟಿದ್ದು, 6.49 ಲಕ್ಷ ರೂ. ನಷ್ಟು ವಂಚಿಸಲಾಗಿದೆ. ಸ್ಥಳೀಯರೇ ಬಲಿಯಾಗಿದ್ದಾರೆ:
 ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಬಂಗಾರದ ಅಡಮಾನ ಸಾಲ ಪಡೆಯಲು ಕೆಲ ನಿಬಂಧನೆಗಳಿವೆ. ಅಡಮಾನ ಸಾಲ ಪಡೆಯಲು ಚುನಾವಣಾ ಆಯೋಗ ನೀಡುವ ಭಾವಚಿತ್ರ ಸಹಿತ ಗುರುತು ಚೀಟಿ (ಎಪಿಕ್ ಕಾರ್ಡ್), ಆಧಾರ್ ಕಾರ್ಡ್, ಭಾವಚಿತ್ರ ನೀಡುವುದು ಕಡ್ಡಾಯವಾಗಿದೆ. ಇದರ ಮಾಹಿತಿ ಅರಿತಿರುವ ವಂಚಕ ಜಾಲವು, ಸ್ಥಳೀಯ ವ್ಯಕ್ತಿಗಳಿಗೆ ಹಣದ ಆಮಿಷವೊಡ್ಡಿ ಅವರ ಎಪಿಕ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕೊಟ್ಟು ಅವರ ಹೆಸರಿನಲ್ಲಿಯೇ ನಕಲಿ ಬಂಗಾರದ ಬಳೆಗಳನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿಟ್ಟಿದೆ. ವಂಚಕರ ಕುಕೃತ್ಯ ಅರಿಯದ ಸ್ಥಳೀಯರು ಹಣದ ಆಸೆಗೆ ತಮ್ಮ ಎಪಿಕ್ ಹಾಗೂ ಆಧಾರ್ ಕಾರ್ಡ್ ಕೊಟ್ಟಿದ್ದಾರೆ. ತಮ್ಮ ಹೆಸರಿನಲ್ಲಿಯೇ ಬಳೆಗಳನ್ನು ಅಡಮಾನವಿಟ್ಟಿದ್ದಾರೆ. ಇದೀಗ ಖಾಸಗಿ ಹಣಕಾಸು ಸಂಸ್ಥೆಯವರು ಸ್ಥಳೀಯರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯ ವೇಳೆ ಸ್ಥಳೀಯರು ಹಣದ ಆಸೆಗೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ನಿಜವಾದ ಆರೋಪಿಗಳು ಯಾರೆಂಬುದು ನಿಗೂಢವಾಗಿ ಪರಿಣಮಿಸಿದೆ. ಬಂಧನವಾಗಿಲ್ಲ: ವಿನೋಬನಗರ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪೊಲೀಸರು ಯಾರೊಬ್ಬರನ್ನು ಬಂಧಿಸಿಲ್ಲ. ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದು, ಮಹಾರಾಷ್ಟ್ರಕ್ಕೆ ಪೊಲೀಸ್ ತಂಡವೊಂದು ತೆರಳುವ ಸಾಧ್ಯತೆಯಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ವಿವಿಧ ಜಿಲ್ಲೆಗಳಲ್ಲಿ ವಂಚನೆ
ಮಣಪ್ಪುರಂ ಶಾಖೆಯ ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ಭದ್ರಾವತಿಯಲ್ಲಿಯೂ ನಕಲಿ ಬಂಗಾರದ ಬಳೆಯಿಟ್ಟು ವಂಚನೆ ಮಾಡಿರುವ ಮಾಹಿತಿಗಳು ಕೇಳಿಬಂದಿವೆ. ಈ ನಡುವೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಹಾಸನ ಜಿಲ್ಲೆಯ ಅರಸೀಕೆರೆ, ರಾಯಚೂರು, ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಸೇರಿದಂತೆ ಹಲವೆಡೆ ನಕಲಿ ಬಂಗಾರದ ಬಳೆಯಿಟ್ಟು ವಂಚನೆ ಮಾಡಿರುವ ಮಾಹಿತಿಗಳು ಬಂದಿವೆ. ಪೊಲೀಸರ ತನಿಖೆಯ ನಂತರವಷ್ಟೇ ಸ್ಪಷ್ಟ ಮಾಹಿತಿ ಬೆಳಕಿಗೆ ಬರಬೇಕಾಗಿದೆ.

ಮೇಲ್ಭಾಗಕ್ಕೆ ಬಂಗಾರದ ಲೇಪನ
ದಂಧೆಕೋರರು ಬ್ರಾಂಡ್ ಬ್ಯಾಂಗಲ್ ಆಕಾರದ ಬಳೆಗಳನ್ನೇ ವಂಚನೆಗೆ ಬಳಸಿಕೊಂಡಿದ್ದಾರೆ. ಈ ಬಳೆಯ ಮೇಲ್ಭಾಗದ ಶೇ. 30 ರಷ್ಟು ಅಸಲಿ ಬಂಗಾರ ಬಳಸಿದ್ದಾರೆ. ಉಳಿದ ಒಳಭಾಗವು ತಾಮ್ರ ಇತರೆ ಲೋಹದ ಬಳಕೆ ಮಾಡಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಬಳೆಗಳನ್ನು ಅಡಮಾನವಿಟ್ಟು ಸಾಲ ಪಡೆಯುವಾಗ, ಸದರಿ ಸಂಸ್ಥೆಯವರು ಬಳೆಗಳ ಅಸಲಿಯತ್ತನ್ನು ಅಪ್ರೈಸರ (ಬಂಗಾರ ಪರಿಶೋಧಕ) ಮೂಲಕ ಪರಿಶೀಲನೆ ನಡೆಸಿದ್ದಾರೆ. ಅಪ್ರೈಸರ್ ಕೂಡ ಇದು ಅಸಲಿ ಬಂಗಾರ, ಸಾಲ ಕೊಡಬಹುದು ಎಂಬ ವರದಿ ಕೊಟ್ಟಿದ್ದಾರೆ. ಸರ್ವೇಸಾಮಾನ್ಯವಾಗಿ ಚಿನ್ನದ ಆಭರಣಗಳ ಪರಿಶೀಲನೆ ವೇಳೆ, ಮೇಲ್ಭಾಗದ ಒಂದಿಷ್ಟು ಭಾಗವನ್ನು ಉಜ್ಜಿ ತೆಗೆಯಲಾಗುತ್ತದೆ. ಇದನ್ನು ವೈಜ್ಞಾನಿಕ ಪರೀಕ್ಷೆಗೊಳಪಡಿಸಲಾಗುತ್ತದೆ. ಈ ಪರೀಕ್ಷೆಯ ಆಧಾರದ ಮೇಲೆ ಇಡೀ ಚಿನ್ನಾಭರಣದ ಗುಣಮಟ್ಟ ಗುರುತಿಸಲಾಗುತ್ತದೆ. ವಂಚಕರು ಬ್ರಾಂಡ್ ಬಳೆಗಳ ಮೇಲ್ಭಾಗದಲ್ಲಿ ಶೇ. 30 ರಷ್ಟು ಅಸಲಿ ಚಿನ್ನ ಬಳಸಿದ್ದಾರೆ. ಅಪ್ರೈಸರ್ ಪರೀಕ್ಷೆಯ ವೇಳೆ ಬಳೆಯ ಮೇಲ್ಭಾಗದ ಒಂದಿಷ್ಟು ತುಣುಕು ಸಂಗ್ರಹಿಸಿ ಪರೀಕ್ಷಿಸಿದ್ದಾರೆ. ಅಸಲಿ ಎಂಬುವುದು ಗೊತ್ತಾದ ಹಿನ್ನೆಲೆಯಲ್ಲಿ ಬ್ಯಾಂಕ್‌ನವರು ಅಡಮಾನವಿಟ್ಟುಕೊಂಡು ಸಾಲ ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಹರಾಜು ವೇಳೆ ನಕಲಿ ಬೆಳಕಿಗೆ

ವಿನೋಬನಗರದಲ್ಲಿರುವ ಮಣಪ್ಪುರಂ ಖಾಸಗಿ ಹಣಕಾಸು ಸಂಸ್ಥೆಯವರು ಇತ್ತೀಚೆಗೆ ಕಾಲಾವಧಿ ಪೂರ್ಣಗೊಂಡ ಬ್ರಾಂಡ್ ಬಳೆಗಳ ಹರಾಜು ಮಾಡಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಈ ಬಳೆಯೊಂದರ ಒಂದಿಷ್ಟು ತುಂಡು ಕತ್ತರಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದಭರ್ದಲ್ಲಿ ಬಳೆಯ ಮೇಲ್ಭಾಗದಲ್ಲಿ ಮಾತ್ರ ಅಸಲಿ ಬಂಗಾರವಿದ್ದು, ಒಳಭಾಗದಲ್ಲಿರುವುದು ನಕಲಿ ಎಂಬುದು ಗೊತ್ತಾಗಿದೆ. ತದನಂತರ ಜಿಲ್ಲೆ ಹಾಗೂ ರಾಜ್ಯದ ಇತರೆಡೆಯಿರುವ ಮಣಪ್ಪುರಂನ ಶಾಖೆಗಳಲ್ಲಿ ಸಂಸ್ಥೆಯವರು ತಪಾಸಣೆ ನಡೆಸಿದ್ದಾರೆ. ಹಲವು ಶಾಖೆಗಳಲ್ಲಿ ನಕಲಿ ಬ್ರಾಂಡ್ ಬಂಗಾರದ ಬಳೆಯಿಟ್ಟು ವಂಚಿಸಿರುವ ಅಂಶ ತಿಳಿದುಬಂದಿದೆ.

Writer - -ಬಿ. ರೇಣುಕೇಶ್

contributor

Editor - -ಬಿ. ರೇಣುಕೇಶ್

contributor

Similar News