ದ್ವಿತೀಯ ಪಿಯುಸಿ ವೌಲ್ಯಮಾಪನ: ಬಹಿಷ್ಕಾರಕ್ಕೆ ನಿರ್ಧಾರ
ಬೆಂಗಳೂರು, ಮಾ.20: ದ್ವಿತೀಯ ಪಿಯುಸಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ವಿಫಲಗೊಂಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ವೌಲ್ಯಮಾಪನ ಬಹಿಷ್ಕರಿಸುವ ಜೊತೆಗೆ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲು ಪದವಿ ಪೂರ್ವ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರವಿವಾರ ನಗರದ ಶಾಸಕರ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪಿಯು ಉಪನ್ಯಾಸಕರು ವೇತನ ತಾರತಮ್ಯ ನಿವಾರಣೆಗೆ 1998ರಿಂದಲೂ ಹೋರಾಟಗಳನ್ನು ಮಾಡುತ್ತಿದ್ದಾರೆ. ಆದರೆ, ಇದುವರೆಗೆ ರಾಜ್ಯ ಸರಕಾರ ಯಾವುದೇ ಸಮಸ್ಯೆಗೂ ಸೂಕ್ತ ಪರಿಹಾರ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಕಳೆದ ನವೆಂಬರ್‌ನಲ್ಲಿ ನಾಲ್ಕು ಹಂತಗಳ ರಾಜ್ಯಮಟ್ಟದ ಹೋರಾಟ ನಡೆಸಲು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಟನೆಗಳು ಕರೆ ನೀಡಿದ್ದವು. ಅದರಂತೆ ಮುಖ್ಯಮಂತ್ರಿ ಅವರಿಗೂ ಮನವಿ ಪತ್ರದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ರಾಜ್ಯ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದ ಅವರು, ಪ್ರತಿ ಬಾರಿ ಉಪನ್ಯಾಸಕರು ಪ್ರತಿಭಟನೆ ಕೈಗೊಂಡಾಗ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆ ಕೈಬಿಡಲಾಗಿದೆ ಎಂದು ಹೇಳಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗೆ ಜಿ.ಕುಮಾರ್‌ನಾಯ್ಕಾ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ವರದಿಯನ್ನು ಸಲ್ಲಿಸಿ, ನಾಲ್ಕು ವರ್ಷಗಳು ಕಳೆದಿದ್ದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.