ಸ್ವತ: ಅಂಬೇಡ್ಕರ್ ಬಂದರೂ ದಲಿತರಿಂದ ಮೀಸಲಾತಿ ಕಿತ್ತುಕೊಳ್ಳಲು ಸಾಧ್ಯವಿಲ್ಲ

Update: 2016-03-21 10:16 GMT

ಹೊಸದಿಲ್ಲಿ , ಮಾ. 21: ದಲಿತರಿಂದ ಯಾರೂ ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸ್ಮಾರಕವೊಂದಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು. 

" ನಾವು ಆಡಳಿತದಲ್ಲಿದ್ದ ಎಲ್ಲೂ ದಲಿತರ , ಆದಿವಾಸಿಗಳ ಮೀಸಲಾತಿಗೆ ಯಾವುದೇ ಧಕ್ಕೆ ಬಂದಿಲ್ಲ. ಆದರೂ ಈ ಸುಳ್ಳನ್ನು ಹರಡಲಾಗುತ್ತಿದೆ. ವಾಜಪೇಯಿಯವರು ಪ್ರಧಾನಿಯಾದಾಗ ಕೆಲವು ವರ್ಗಗಳು ಮೀಸಲಾತಿ ಹೋಗುತ್ತದೆ ಎಂದು ಹೇಳಲು ಪ್ರಾರಂಭಿಸಿದರು. ಆದರೆ ವಾಜಪೇಯಿ ಎರಡು ಅವಧಿಗೆ ಪ್ರಧಾನಿಯಾಗಿದ್ದರೂ ಅಂತಹದ್ದೇನೂ ಆಗಿಲ್ಲ " ಎಂದು ಮೋದಿ ಹೇಳಿದರು. 

ಅಂಬೇಡ್ಕರ್ ಕನಸಿನಂತೆ ದೇಶದ 18,000 ಹಳ್ಳಿಗಳಿಗೆ ವಿದ್ಯುತ್ ನೀಡಲು ತಮ್ಮ ಸರಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ ಮೋದಿ " ಈ ಹಳ್ಳಿಗಳು ವಿದ್ಯುತ್ ಪಡೆದಾಗ ಅದರ ಕೀರ್ತಿಯನ್ನು ಮೋದಿಗೆ ( ನನಗೆ ) ಕೊಡಬೇಡಿ, ಆ ಕೀರ್ತಿಯನ್ನು ಅಂಬೇಡ್ಕರ್ ಗೆ ನೀಡಿ " ಎಂದು ಹೇಳಿದರು. " ಇದೆಲ್ಲ ಅವರ ಐಡಿಯಾಗಳು. ನಡುವೆ ಕೆಲವರು ಅದನ್ನು ಹಾಳುಗೆಡವಿದರು.  " ಎಂದು ಮೋದಿ  ಕಾಂಗ್ರೆಸ್ ವಿರುದ್ಧ ಪರೋಕ್ಷ ದಾಳಿ ಮಾಡಿದರು .  

" ಬಾಬಾಸಾಹೇಬ್ ನಿರ್ಲಕ್ಷಿತ ವರ್ಗಗಳ ಧ್ವನಿಯಾಗಿದ್ದರು. ಅವರನ್ನು ಒಂದು ಜಾತಿಯ ನಾಯಕರಾಗಿ ನೋಡಬಾರದು. ಅವರು ಮಾನವೀಯ ಮೌಲ್ಯಗಳ ರಕ್ಷಕರಾಗಿದ್ದರು. ನಾನು ಈ ಹಿಂದೆಯೂ ಹೇಳಿದ್ದೇನೆ. ಈಗ ಸ್ವತಹ ಅಂಬೇಡ್ಕರ್ ಅವರೇ ಬಂದರೂ ನಿಮ್ಮ ಈ ಹಕ್ಕನ್ನು ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಇನ್ನು ಅವರ ಮುಂದೆ ನಾವು ಯಾರು ? " ಎಂದು ಮೋದಿ ಭರವಸೆ ನೀಡಿದರು. 

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ದಲಿತರಿಗೆ ಪ್ರಧಾನಿ ಮೋದಿ ಈ  ಸ್ಪಷ್ಟ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News