×
Ad

ಒಂದು ವರ್ಷದಲ್ಲಿ 11 ಕೋಟಿ ರೂ. ಪರಿಹಾರ ವಿತರಣೆ: ರಾಮಲಿಂಗಾರೆಡ್ಡಿ

Update: 2016-03-21 22:47 IST

ಬೆಂಗಳೂರು, ಮಾ.21: ಬಿಎಂಟಿಸಿ ಬಸ್‌ಗಳಿಗೆ ಸಿಲುಕಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಕಳೆದ ಒಂದು ವರ್ಷದಲ್ಲಿ ಸಂಸ್ಥೆಯಿಂದ ಹಾಗೂ ನ್ಯಾಯಾಲಯದ ಆದೇಶದಂತೆ ಸುಮಾರು 11 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ರವಿವಾರ ವಿಧಾನ ಪರಿಷತ್‌ನ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಸಂದರ್ಭದಲ್ಲಿ ಬಿಜೆಪಿ ಸದಸ್ಯೆ ವಿಮಲಾಗೌಡ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಅಪಘಾತಗಳು ಸಂಭವಿಸಿ ಸಾವು ಹಾಗೂ ಗಾಯಗಳಾಗಬಾರದೆಂಬ ಉದ್ದೇಶದಿಂದ ಸಂಸ್ಥೆಯು ಚಾಲಕರಿಗೆ ವ್ಯಕ್ತಿತ್ವ ವಿಕಸನ, ಸುರಕ್ಷಾ-ಚಾಲನೆ, ಸಂಚಾರ ನಿಯಮಗಳ ಪಾಲನೆ, ಇಂಧನ ಕ್ಷಮತೆ, ವಾಹನಗಳ ದೋಷಗಳ ಬಗ್ಗೆ ತಿಳುವಳಿಕೆ ಜೊತೆಗೆ ಮಾನಸಿಕ ಒತ್ತಡ ನಿರ್ವಹಣೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಿಕೆ ಸೇರಿ ಇತರೆ ವಿಷಯಗಳ ಬಗ್ಗೆ ಪ್ರಾದೇಶಿಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಎಪ್ರಿಲ್ 2015ರಿಂದ ಫೆಬ್ರವರಿ 2016ರವರೆಗೆ ಬಿಎಂಟಿಸಿ ಬಸ್‌ಗಳ ಅಪಘಾತದಿಂದ 60 ಜನರು ಮೃತಪಟ್ಟಿದ್ದು, 280 ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಈ ಅಪಘಾತಗಳನ್ನು ನಿಯಂತ್ರಿಸುವುದಕ್ಕಾಗಿ ಅಧಿಕಾರಿಗಳು ಘಟಕಗಳಿಗೆ ಭೇಟಿ ನೀಡಿ ಚಾಲಕರನ್ನು ಉದ್ದೇಶಿಸಿ ಸುರಕ್ಷಿತ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿ ವಾಹನವನ್ನು ಚಾಲನೆ ಮಾಡುವಂತೆ ಹಾಗೂ ವಾಹನಗಳ ಅಪಘಾತಗಳ ತೀವ್ರತೆಯನ್ನು ಮತ್ತು ಸಂಸ್ಥೆಗೆ ಹೆಚ್ಚಿನ ಆರ್ಥಿಕ ನಷ್ಟ ಉಂಟಾಗುವ ಬಗ್ಗೆ ಚಾಲಕರಿಗೆ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News