ಅಂಗನವಾಡಿಗಳಲ್ಲಿನ ಖಾಲಿ ಹುದ್ದೆ ಎರಡು ತಿಂಗಳಲ್ಲಿ ಭರ್ತಿ: ಉಮಾಶ್ರೀ
ಬೆಂಗಳೂರು, ಮಾ.21: ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಎರಡು ತಿಂಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಸೋಮವಾರ ವಿಧಾನ ಪರಿಷತ್‌ನ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ವೇಳೆಯಲ್ಲಿ ಜೆಡಿಎಸ್ ಸದಸ್ಯ ಟಿ.ಎ. ಶರವಣ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ರಾಜ್ಯ ಸರಕಾರ ಪ್ರಸ್ತುತ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 4 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, ಎರಡು ತಿಂಗಳಲ್ಲಿಯೇ ಅಂಗನವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಅಂಗನವಾಡಿಗೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನೇಮಿಸಿಕೊಳ್ಳುವಾಗ ಅವರು ಶಿಕ್ಷಣದ ಅರ್ಹತೆ ಹಾಗೂ ವಿಧಿಸಿದ ಮಾನದಂಡಗಳಲ್ಲಿ ಪಾಸಾಗಿರಬೇಕಾಗುತ್ತದೆ. ಆ ಎಲ್ಲ ಅರ್ಹತೆಗಳಲ್ಲಿ ಪಾಸಾದರೆ ಅವರನ್ನು ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಲಗ್ಗೆರೆ ಹಳೆ ಊರು, ಶಾರದಾಂಬ ನಗರ, ಪ್ರೀತಿ ನಗರ, ರಾಜೀವ್‌ಗಾಂಧಿನಗರ, ಅಂಬೇಡ್ಕರ್‌ನಗರ, ರಾಜೇಶ್ವರಿನಗರ, ಪಟ್ಟಣಗೆರೆ, ಚನ್ನಸಂದ್ರ ಸೇರಿ ಒಟ್ಟು 8 ಹೊಸ ಅಂಗನವಾಡಿ ಕೇಂದ್ರಗಳ ಆವಶ್ಯಕತೆ ಇದ್ದು, ಇವುಗಳನ್ನು ಪ್ರಾರಂಭಿಸಲು ಕೇಂದ್ರ ಸರಕಾರದಿಂದ ಮಂಜೂರಾತಿ ದೊರೆತ್ತಿದ್ದು, ಆಡಳಿತಾತ್ಮಕ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.